
ಚಿತ್ರದುರ್ಗ: ‘ವಿವಿಧ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಅಧಿಕಾರಿಗಳು ಗೌರವ ನೀಡಬೇಕು. ಅವರು ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿ ಸೌಜನ್ಯದಿಂದ ವರ್ತಿಸಬೇಕು. ಈ ಕುರಿತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಸೂಚನೆ ನೀಡಿದರು.
ನಗರದ ಉಪವಿಭಾಗಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪಾಲಕರ ಮತ್ತು ಪೋಷಕರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ, ಅಂಗವಿಕಲರ ಪುನರ್ವಸತಿ ಕೇಂದ್ರದ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿ ಸಭೆ ಹಾಗೂ ಕುಂದುಕೊರತೆಗಳ ನಿವಾರಣಾ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸರ್ಕಾರಿ ಬಸ್ ಪ್ರಯಾಣದ ವೇಳೆ ನಿಗದಿಪಡಿಸಿದ ಆಸನಗಳಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಕುಳಿತು ಪ್ರಯಾಣಿಸಲು ನಿರ್ವಾಹಕರು ಅವಕಾಶ ಕಲ್ಪಿಸಿಕೊಡಬೇಕು. ಈ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕು’ ಎಂದರು.
‘ಫೆ.28ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಜರುಗಲಿದೆ. ಈ ವೇಳೆ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿರುವ ಹಿರಿಯ ನಾಗರಿಕರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಪಕ್ಷಗಾರರ ಮನವೊಲಿಸಬೇಕು. ಪೊಷಕರ ನಿರ್ವಹಣೆಗೆ ಹಣ ನೀಡುವಂತೆ ಆದೇಶ ಮಾಡಿದರೂ ಕೆಲ ಮಕ್ಕಳು ಆದೇಶ ಪಾಲನೆ ಮಾಡುತ್ತಿಲ್ಲ. ಈ ಕುರಿತು ಹಿರಿಯ ನಾಗರಿಕರು ಪುನಃ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ಇಂತಹ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಬೇಕು’ ಎಂದರು.
‘ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶೇ 5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲು ಸ್ಪಷ್ಟ ನಿರ್ದೇಶನವಿದೆ. ಆದರೆ, ಗ್ರಾಮ ಪಂಚಾಯಿತಿಗಳು ಅನುದಾನ ಬಳಕೆ ಮಾಡುತ್ತಿಲ್ಲ. ಅಂಗವಿಕಲರಿಗೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಕೂಡಲೇ ಅಧಿಕಾರಿಗಳು ಅನುದಾನ ಬಳಕೆಗೆ ಕ್ರಮ ಕೈಗೊಳ್ಳಬೇಕು. ಹಿರಿಯ ನಾಗರಿಕರ ಕಲ್ಯಾಣಧಿಕಾರಿಗಳು ನಿರ್ವಹಣೆ ನೀಡಿದ ಆದೇಶಗಳು ಜಾರಿಯಾಗುವಂತೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
‘ಜಿಲ್ಲೆಯಲ್ಲಿ ಎರಡು ಅನುದಾನಿತ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 60 ವರ್ಷ ಮೇಲ್ಪಟ್ಟ 42,198 ಫಲಾನುಭವಿಗಳು ₹ 800, 65 ವರ್ಷ ಮೇಲ್ಪಟ್ಟ 1,10,475 ಫಲಾನುಭವಿಗಳು ₹ 1,200 ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ವೈಶಾಲಿ.ಜೆ ಮಾತನಾಡಿ ಎಂದರು.
‘ಜನವರಿ ಅಂತ್ಯಕ್ಕೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 35 ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 19 ಪ್ರಕರಣಗಳು ದಾಖಲಾಗಿವೆ. 2011 ಜನಗಣತಿ ಅನುಸಾರ ಜಿಲ್ಲೆಯಲ್ಲಿ 35,971 ಅಂಗವಿಕಲರಿದ್ದಾರೆ. 35,074 ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ನೀಡಲಾಗಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್, ಉಪವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ನರಸಿಂಹಮೂರ್ತಿ, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಆನಂದ್ ಪ್ರಕಾಶ್ ಇದ್ದರು.
ಎಲ್ಲಾ ಬಸ್‌ಗಳಲ್ಲೂ ಅಂಗವಿಕಲರಿಗೆ ಆಸನ ಕೊಡಿ ಗ್ರಾ.ಪಂ.ನಲ್ಲಿ ಮೀಸಲಿಟ್ಟ ಅನುದಾನ ಬಳಕೆಗೆ ಸೂಚನೆ ವಿವಿಧ ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳಲಿ
ವೃದ್ಧಾಶ್ರಮಗಳ ನೋಂದಣಿಗೆ ಸೂಚನೆ
‘ಜಿಲ್ಲೆಯಲ್ಲಿ ನೋಂದಣಿಯಾಗದೇ ಕಾರ್ಯಚರಣೆ ನಡೆಸುತ್ತಿರುವ ವೃದ್ಧಾಶ್ರಮಗಳ ನೋಂದಣಿಗೆ ಕ್ರಮ ವಹಿಸಬೇಕು. ಈ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಉಪ ವಿಭಾಗಾಧಿಕಾರಿಗಳು ಸೂಚಿಸಿದರು. ‘ಸಂಧ್ಯಾ ಸುರಕ್ಷಾ ಯೋಜನೆಯಡಿ ₹ 800 ಪಿಂಚಣಿ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ 65 ವರ್ಷ ದಾಟಿದ ನಂತರ ₹ 1200 ನೀಡಲು ಸರ್ಕಾರ ಆದೇಶ ನೀಡಿದೆ. ಈ ಕುರಿತು ಪಿಂಚಣಿ ಅದಾಲತ್‌ಗಳ ಮೂಲಕ ಹಿರಿಯ ನಾಗರಿಕರಿಗೆ ಮಾಹಿತಿ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.