ADVERTISEMENT

ಲಸಿಕೆ, ಕೋವಿಡ್ ಪರೀಕ್ಷಾ ಸ್ಥಳ ಪ್ರತ್ಯೇಕಿಸಿ: ಶಾಸಕ ಎಂ. ಚಂದ್ರಪ್ಪ

ಅಧಿಕಾರಿಗಳಿಗೆ ಶಾಸಕ ಎಂ. ಚಂದ್ರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 5:46 IST
Last Updated 7 ಜೂನ್ 2021, 5:46 IST
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಶಾಸಕ ಎಂ. ಚಂದ್ರಪ್ಪ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು
ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಶಾಸಕ ಎಂ. ಚಂದ್ರಪ್ಪ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು   

ಭರಮಸಾಗರ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಮತ್ತು ಲಸಿಕೆ ನೀಡುವ ಸ್ಥಳ ಒಂದೇ ಸ್ಥಳದಲ್ಲಿ ಇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಒಂದು ಕೊಠಡಿಯಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆಸೂಚಿಸಿದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಒಂದು ವಿಭಾಗವನ್ನು ಆಸ್ಪತ್ರೆ ಇನ್ನೊಂದು ಕಡೆ ಅಥವಾ ಇಲ್ಲಿನ ಸರ್ಕಾರಿ ಶಾಲಾ ಕಟ್ಟಡಕ್ಕೆ ವರ್ಗಾಯಿಸಬೇಕು. ಲಸಿಕೆಯನ್ನು ಹೊರ ಜಿಲ್ಲೆಯವರು ಹಾಗೂ ದೂರದ ಊರುಗಳವರು ಬಂದು ಪಡೆಯುತ್ತಿರುವುದರಿಂದ ಸ್ಥಳೀಯರಿಗೆ ಲಸಿಕೆ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಆಧಾರ್ ಕಾರ್ಡ್ ಪರೀಕ್ಷಿಸಿ ಮೊದಲು ಸ್ಥಳೀಯರಿಗೆ, ಹೋಬಳಿಯರಿಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಲಸಿಕೆ ಕೊರತೆಯುಂಟಾಗಬಾರದು ಎಂದು ಸೂಚಿಸಿದರು.

ADVERTISEMENT

ಸಮೀಪದ ಕೋಡಿರಂಗವ್ವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇಂದ್ರಕ್ಕೆ ಇದುವರೆಗೂ ಒಬ್ಬರೂ ದಾಖಲಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿ ತಕ್ಷಣ ಸೋಂಕಿತರು ಕಂಡು ಬಂದರೆ ಕೇಂದ್ರಕ್ಕೆ ದಾಖಲಿಸಬೇಕು. ಅಲ್ಲಿ ಎಲ್ಲಾ ವ್ಯವಸ್ಥೆ ಇರುವ ಬಗ್ಗೆ ಸೋಂಕಿತರಿಗೆ ಮನದಟ್ಟು ಮಾಡಬೇಕು. ಈಗಾಗಲೇ ಸಿರಿಗೆರೆಯಲ್ಲಿ 34ಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದು, ಆ ಭಾಗದ ಹೆಚ್ಚಿನ ಸೋಂಕಿತರನ್ನು ಇಲ್ಲಿಗೆ ದಾಖಲಿಸಬೇಕು ಎಂದರು.

ದೂರವಾಣಿಯಲ್ಲಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಟಿಎಚ್ಒ ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ. ಶರಣಪ್ಪ, ಟಿಎಪಿಎಂಸಿ ಅಧ್ಯಕ್ಷ ಎಂ.ಎಚ್. ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಚಂದ್ರು, ಬೆಸ್ಕಾಂ ನಿವೃತ್ತ ಎಂಜಿನಿಯರ್ ಚಂದ್ರಶೇಖರಪ್ಪ, ನಾರಾಯಣರಾವ್, ತರಗಾರ್ ಮಂಜುನಾಥ್, ಶ್ರೀಧರ್, ಓಂಕಾರಯ್ಯ, ಸಿದ್ದಲಿಂಗಪ್ಪ, ನಾಗೇಂದ್ರಪ್ಪ, ಎನ್.ಕೆ. ರಾಜಶೇಖರ್, ಡಿ.ಎಸ್.ಪ್ರದೀಪ್, ಫಣಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.