ADVERTISEMENT

ಚಿತ್ರದುರ್ಗ | ವೈಚಾರಿಕ ಚಿಂತನೆಯ ‘ಶರಣ ದಸರಾ’ಕ್ಕೆ ತೆರೆ

ಮಠದಂಗಳದಲ್ಲಿ ಶೂನ್ಯಪೀಠಾರೋಹಣ; ಜಾನಪದ ಕಲಾತಂಡಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:43 IST
Last Updated 4 ಅಕ್ಟೋಬರ್ 2025, 6:43 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ನಡೆದ ಶೂನ್ಯ ಪೀಠಾರೋಹಣ
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ನಡೆದ ಶೂನ್ಯ ಪೀಠಾರೋಹಣ   

ಚಿತ್ರದುರ್ಗ: ರಾಜ್ಯದಲ್ಲಿ ವೈಚಾರಿಕ ಚಿಂತನೆಯ ದಸರಾ ಎಂದೇ ಖ್ಯಾತಿಗಳಿಸಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಶುಕ್ರವಾರ ಶೂನ್ಯ ಪೀಠಾರೋಹಣ, ಪ್ರಾಚೀನ ವಚನಗಳ ಹಸ್ತಪ್ರತಿಯ ಮೆರವಣಿಗೆ ಮೂಲಕ ಅರ್ಥಪೂರ್ಣ ತೆರೆ ಬಿದ್ದಿತು.

ಅಧ್ಯಾತ್ಮ, ಆರೋಗ್ಯ, ಶಿಕ್ಷಣ, ವಚನ, ಕೃಷಿಯ ಸಂಗಮವಾಗಿ 13 ದಿನ ಉತ್ಸವ ನಡೆಯಿತು. ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹಾಗೂ ಸದಸ್ಯ ಬಸವ ಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಸೆ. 20ರಿಂದ ಅ. 3ರವರೆಗೆ ವಿಭಿನ್ನ, ವಿಶಿಷ್ಟ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಿದವು. ನಿರಂತರ ಜ್ಞಾನ, ಅನ್ನ ದಾಸೋಹದಿಂದ ಭಕ್ತರು ಸಂಪನ್ನರಾದರು.

ಶರಣ ಸಂಸ್ಕೃತಿ ಉತ್ಸವದಲ್ಲಿ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸಂಪ್ರದಾಯದಂತೆ ಶ್ರೀಮಠದ ರಾಜಾಂಗಣದ ಸದರುಕಟ್ಟೆಯಲ್ಲಿ ಚಿನ್ನದ ಕಿರೀಟ, ಚಿನ್ನದ ಪಾದುಕೆ ಹಾಗೂ ಚಿನ್ನದ ರುದ್ರಾಕ್ಷಿ ಸರವನ್ನು ಗದ್ದುಗೆ ಬಳಿಯಿಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ಮಠದ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿಯ ಪುತ್ಥಳಿಯನ್ನು ಇಡುವ ಮೂಲಕ ಶೂನ್ಯ ಪೀಠಾರೋಹಣ ಮಾಡಲಾಯಿತು.

ADVERTISEMENT

ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ಪೀಠಾಧ್ಯಕ್ಷರು ಶೂನ್ಯ ಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವುದು ವಾಡಿಕೆ. ಆದರೆ, ಪೀಠಾಧ್ಯಕ್ಷ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ 2022ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ನ್ಯಾಯಾಲಯದ ಆದೇಶದಂತೆ ಚಿತ್ರದುರ್ಗ ಪ್ರವೇಶಿಸದ ಕಾರಣ 2022ರಲ್ಲಿ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿಯ ಭಾವಚಿತ್ರ, 2023ರಲ್ಲಿ ಮುರುಗಿ ಶಾಂತವೀರ ಸ್ವಾಮೀಜಿಯ ಕಂಚಿನ ಪುತ್ಥಳಿ ಹಾಗೂ 2024ರಲ್ಲಿ ಚಿನ್ನದ ಕಿರೀಟ, ಚಿನ್ನದ ಪಾದುಕೆ ಹಾಗೂ ಚಿನ್ನದ ರುದ್ರಾಕ್ಷಿ ಸರವನ್ನು ಗದ್ದುಗೆ ಬಳಿ ಇಡದೇ ಪೀಠಾರೋಹಣದ ವಿಧಿ–ವಿಧಾನ ಪೂರೈಸಲಾಗಿತ್ತು. 

ಶ್ರೀಮಠದ ರಾಜಾಂಗಣದಲ್ಲಿ ಬಿಡಿಸಿದ್ದ ಹೂವಿನ ಬೃಹತ್ ಅಲಂಕಾರ ಭಕ್ತರ ಗಮನ ಸೆಳೆಯಿತು. ಪೀಠಾರೋಹಣ ಹಾಗೂ ಮೆರವಣಿಗೆಯ ಅಂಗವಾಗಿ ಮಠವನ್ನು ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ರಾಜಾಂಗಣದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಬಳಿಕ ಮಠದ ಆವರಣದಲ್ಲಿ ಶೂನ್ಯಪೀಠ ಪರಂಪರೆಯ ಸಂಸ್ಥಾಪಕ ಅಲ್ಲಮಪ್ರಭು ಹಾಗೂ ಧರ್ಮ ಸಂಸ್ಥಾಪಕ ಬಸವಣ್ಣನವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿಟ್ಟು ಶ್ರೀಮಠದ ಆವರಣದಲ್ಲಿ ಮೆರವಣಿಗೆಯನ್ನು ನೆರವೇರಿಸಲಾಯಿತು. ಪಲ್ಲಕ್ಕಿಯನ್ನು ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಶೂನ್ಯ ಪೀಠಾರೋಹಣದ ಕೈಂಕರ್ಯಗಳನ್ನು ಮುಗಿಸಿ ಮಠಾಧೀಶರು ಹೊರಬರುತ್ತಿದ್ದಂತೆ ಮೆರವಣಿಗೆಯ ಸಿದ್ಧತೆಗಳು ಪೂರ್ಣಗೊಂಡವು. ಶೂನ್ಯ ಪೀಠಾಧ್ಯಕ್ಷ ಅಲ್ಲಮಪ್ರಭು ಹಾಗೂ ಬಸವಣ್ಣನವರಿಗೆ ಜಯಘೋಷ ಮೊಳಗಿಸಲಾಯಿತು.

ಪಲ್ಲಕ್ಕಿಯ ಮುಂದೆ ಮಠದ ಆನೆ ರಾಜ ಗಾಂಭೀರ್ಯದಿಂದ ಸಾಗಿತು. ವೀರಗಾಸೆ ಸೇರಿ ಹಲವು ಕಲಾತಂಡಗಳು ಆನೆಯೊಂದಿಗೆ ಸಾಗಿದವು. ವಿವಿಧ ಮಠಾಧೀಶರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪಲ್ಲಕ್ಕಿಗೆ ಹೆಗಲುಕೊಡುತ್ತ ಭಕ್ತರು ಭಕ್ತಿ ಸಮರ್ಪಿಸಿದರು. ಮಠದ ಆವರಣದಲ್ಲಿ ಸೇರಿದ್ದ ಭಕ್ತರು ಮೆರವಣಿಗೆ ಕಣ್ತುಂಬಿಕೊಂಡರು.

ಆಡಳಿತ ಮಂಡಳಿ ಸದಸ್ಯ ಎಸ್.ಎನ್.ಚಂದ್ರಶೇಖರ್, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಂಡಿದ್ದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ನೆರವೇರಿದ ಪ್ರಾಚೀನ ವಚನಗಳ ಹಸ್ತಪ್ರತಿಯ ಮೆರವಣಿಗೆ
ಶೂನ್ಯ ಪೀಠಾರೋಹಣದಲ್ಲಿ ಹೆಜ್ಜೆ ಹಾಕಲು ಸಿದ್ಧರಾಗಿದ್ದ ವೀರಗಾಸೆ ಕಲಾವಿದರು ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಶ್ರೀಮಠದ ಜಯದೇವ ಜಂಗೀಕುಸ್ತಿ ದೇಶದಲ್ಲಿಯೇ ಪ್ರಖ್ಯಾತಿಗಳಿಸಿದೆ. ಕುಸ್ತಿಯಲ್ಲಿ ಮಕ್ಕಳು ಮಹಿಳೆಯರು ಭಾಗವಹಿಸಿರುವುದು ನೋಡಿದರೆ ಕುಸ್ತಿಯ ಮಹತ್ವವನ್ನು ಕಾಣಬಹುದಾಗಿದೆ
ಬಸವಕುಮಾರ ಸ್ವಾಮೀಜಿ ಆಡಳಿತ ಮಂಡಳಿ ಸದಸ್ಯರು
ಜಯದೇವ ಜಂಗೀಕುಸ್ತಿಗೆ ಐವತ್ತು ವರ್ಷಗಳ ಇತಿಹಾಸವಿದೆ. ದೇಶದ ಹಲವು ರಾಜ್ಯಗಳಿಂದ ಬಂದು ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವುದು ಸಂತಸದ ಸಂಗತಿಯಾಗಿದೆ
ಬಸವನಾಗಿದೇವ ಸ್ವಾಮೀಜಿ ಛಲವಾದಿ ಗುರುಪೀಠ
ಜಯದೇವ ಜಂಗೀಕುಸ್ತಿ
ಗಮ್ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಶುಕ್ರವಾರ ಜಯದೇವ ಜಂಗೀಕುಸ್ತಿ ನಡೆಯಿತು. ಮಧ್ಯಪ್ರದೇಶ ಉತ್ತರ ಪ್ರದೇಶ ಮಹಾರಾಷ್ಟ್ರ ಕೊಲ್ಲಾಪುರ ಆಂಧ್ರಪ್ರದೇಶದಿಂದ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಜಂಗೀ ಕುಸ್ತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿ ತಮ್ಮ ನೆಚ್ಚಿನ ಪೈಲ್ವಾನ್‌ರನ್ನು ಹುರಿದುಂಬಿಸಿ ಕುಸ್ತಿಯ ಪಟ್ಟುಗಳನ್ನು ನೋಡಿ ಕೇಕೆ ಹಾಕುತ್ತ ಕುಣಿದು ಕುಪ್ಪಳಿಸಿದರು. ಮಹಿಳೆಯರ ವಿಭಾಗದಲ್ಲಿ ಬಾಗಲಕೋಟೆಯ ಐಶ್ವರ್ಯಾ ಪ್ರಥಮ ಸ್ಥಾನಗಳಿಸುವ ಮೂಲಕ ಒನಕೆ ಓಬವ್ವ ಪ್ರಶಸ್ತಿ ದಾವಣಗೆರೆಯ ಆಕಾಂಕ್ಷ ದ್ವಿತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಸಾಂಗ್ಲಿಯ ಪ್ರದೀಪ್‌ ಠಾಕೂರ್ ಪ್ರಥಮ ಸ್ಥಾನದ ಮೂಲಕ ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿ ಮಧ್ಯಪ್ರದೇಶದ ರೋಹಿತ್‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ತೀರ್ಪುಗಾರರಾಗಿ ಪೈಲ್ವಾನ್‌ ತಿಪ್ಪೇಸ್ವಾಮಿ ರಫೀಜ್‌ ಹೋಳಿ ಮರಡಿ ಅಮೃತಣ್ಣ ಮೈಸೂರು ಭರತ್‌ ಮೂರ್ತಿ ಕಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.