ADVERTISEMENT

ಚಿತ್ರದುರ್ಗ: ಆರು ಶಿಕ್ಷಕರಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 3:32 IST
Last Updated 6 ಜನವರಿ 2021, 3:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಶಿಕ್ಷಣ ಇಲಾಖೆ ಶಾಲೆಗಳನ್ನು ಆರಂಭಿಸಿದ ನಂತರ ವಿದ್ಯಾಗಮ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಆರು ಶಿಕ್ಷಕರಿಗೆ ಕೋವಿಡ್–19 ದೃಢಪಟ್ಟಿದೆ.

ಹೊಸದುರ್ಗ ತಾಲ್ಲೂಕಿನ ನಾಲ್ವರು, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನ ತಲಾ ಒಬ್ಬರು, ಹೊಳಲ್ಕೆರೆಯ ಮೊರಾರ್ಜಿ ಶಾಲೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಸೇರಿ ಒಟ್ಟು ಏಳು ಜನರಿಗೆ ಕೊರೊನಾ ಸೋಂಕು ಇರುವುದು ಸೋಮವಾರ ಹಾಗೂ ಮಂಗಳವಾರದ ವರದಿಯಿಂದ ಖಚಿತವಾಗಿದೆ.

ಸೋಂಕು ತಗುಲಿದ ಎಲ್ಲ ಶಿಕ್ಷಕರನ್ನು ಅವರವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್ ದೃಢಪಟ್ಟಿರುವ ಶಿಕ್ಷಕರು ಒಂದು ವೇಳೆ ತರಗತಿಗೆ ತೆರಳಿ ಪಾಠ ಮಾಡಿದ್ದರೆ, ಮಕ್ಕಳು ಸಂಪರ್ಕದಲ್ಲಿದ್ದಿದ್ದರೆ ಆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ತಿಳಿಸಿದ್ದಾರೆ.

ADVERTISEMENT

ಕೋವಿಡ್ ದೃಢಪಟ್ಟಿರುವ ಆರು ಶಿಕ್ಷಕರು, ದ್ವಿತೀಯ ದರ್ಜೆ ಸಹಾಯಕರೊಬ್ಬರು ಕರ್ತವ್ಯಕ್ಕೆ ಇನ್ನೂ ಹಾಜರಾಗಿರಲಿಲ್ಲ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಮಾಹಿತಿ ನೀಡಿದ್ದಾರೆ.

ಐವರಿಗೆ ಕೋವಿಡ್ ದೃಢ: ಜಿಲ್ಲೆಯಲ್ಲಿ ಮಂಗಳವಾರ ಐದು ಜನರಲ್ಲಿ ಕೋವಿಡ್‌ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,387 ತಲುಪಿದೆ. ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 6 ಜನ ಗುಣಮುಖರಾಗಿದ್ದಾರೆ.

2,220 ಜನರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಯಿತು. ಪರೀಕ್ಷೆ ಮಾಡಿದ ಮಾದರಿಗಳಲ್ಲಿ ಐದು ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ 91 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರಲ್ಲಿ 14,228 ಜನರು ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ 68 ಜನರು ಮೃತಪಟ್ಟಿದ್ದಾರೆ. ಇನ್ನೂ 1,056 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.