
ಚಿತ್ರದುರ್ಗ: ‘ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಭೇದ ಇರಬೇಕು. ಚುನಾವಣೆಗಳು ಮುಗಿದ ಕೂಡಲೇ ನಾವೆಲ್ಲರೂ ಒಂದಾಗಿ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು, ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ಮಂಗಳವಾರ ನಡೆದ ಆದಿಶಕ್ತಿ ಮಾತಂಗೇಶ್ವರಿ ದೇಗುಲ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದರು.
‘ಚುನಾವಣೆ ಸಮಯದಲ್ಲಿ ನಾವು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುತ್ತೇವೆ. ಚುನಾವಣೆ ಮುಗಿದ ನಂತರ ನಾವು ಸಮಾಜಕ್ಕಾಗಿ ಕೆಲಸ ಮಾಡಬೇಕು. ದೇಗುಲ ನಿರ್ಮಾಣಕ್ಕೆ ಶ್ರೀಗಳು ಯಾರಿಂದಲೂ ಹಣ ಕೇಳಬಾರದು. ಪೂರ್ಣ ಪ್ರಮಾಣದ ವೆಚ್ಚವನ್ನು ಭಕ್ತರೇ ನಿರ್ವಹಣೆ ಮಾಡಬೇಕಿದೆ. ಬೆಂಗಳೂರಿನಲ್ಲಿ ಮಾದಾರ ಮಹಾ ಸಭಾ ಕಚೇರಿ ಮಾಡಲಾಗುತ್ತಿದ್ದು ಶ್ರೀಗಳಿಂದ ಉದ್ಘಾಟನೆ ಮಾಡಿಸಲಾಗುವುದು’ ಎಂದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ‘ಇಂದಿನ ದಿನಮಾನದಲ್ಲಿ ಶೋಷಿತರು ದೇವರನ್ನು ಹೆಚ್ಚಾಗಿ ಪೂಜೆ ಮಾಡುತ್ತಿದ್ದಾರೆ. ಮಾದಿಗರಿಗೆ ಮಾತಂಗಿ ಕುಲ ದೇವತೆಯಾದರೂ ಎಲ್ಲಿಯೂ ದೇವಾಲಯ ಇಲ್ಲವಾಗಿದೆ. ಇಂದು ಕೆಲವರು ಸಂವಿಧಾನ ಪುಸ್ತಕ ತೋರಿಸುತ್ತಾ ಓಡಾಡುತ್ತಾರೆ. ಆದರೆ ಅದರಲ್ಲಿ ಏನಿದೆ ಎಂಬುದೇ ತಿಳಿದಿರುವುದಿಲ್ಲ’ ಎಂದರು.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ‘ಆಧುನಿಕ ಕಾಲದಲ್ಲಿ ಶಿಕ್ಷಣ ಪಡೆಯಲು ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರಿ ಸೌಲಭ್ಯ ಹಾಗೂ ಉದ್ಯೋಗವನ್ನು ಪಡೆಯುವಲ್ಲಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಸಾಧರು, ಮಾದರು ಅಣ್ಣ-ತಮ್ಮಂದಿರು ಇದ್ದಂತೆ. ಇಬ್ಬರಲ್ಲೂ ಉತ್ತಮ ಒಡನಾಟವಿದೆ’ ಎಂದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಮಾತನಾಡಿ ‘ರಾಜಕೀಯವಾಗಿ ನಮ್ಮ ಸಮುದಾಯ ಬೆಳೆಯಬೇಕಿದೆ, ಮಠಗಳು ಸಮುದಾಯದ ರಾಜಕಾರಣಿಗಳನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ. ಈ ಹಿಂದೆ ನಮ್ಮ ಮಠಕ್ಕೆ ಕರೆದಾಗ ತಿರಸ್ಕಾರದಿಂದ ನೋಡುತ್ತಿದ್ದವರು. ಈಗ ಅಭಿಮಾನದಿಂದ ಬರುತ್ತಿದ್ದಾರೆ. ಮಾತಂಗಿ ದೇವಾಲಯವನ್ನು ಶೀಘ್ರದಲ್ಲಿಯೇ ಮುನಿಯಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗುವುದು. ಅಯೋಧ್ಯೆ ಶ್ರೀರಾಮ ವಿಗ್ರಹ ಕೆತ್ತನೆ ಮಾಡಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಮಾತಂಗೇಶ್ವರಿ ದೇವಿಯ ವಿಗ್ರಹ ಕೆತ್ತನೆ ಮಾಡಲಿದ್ದಾರೆ’ ಎಂದರು.
ಕನಕ ಪೀಠದ ಪೀಠಾಧ್ಯಕ್ಷ ನಿರಂಜನಾಂದಪುರಿ ಸ್ವಾಮೀಜಿ ಮಾತನಾಡಿ ‘ಮಾದರ ಚೆನ್ನಯ್ಯ ಶ್ರೀಗಳು ನಿರಂತರವಾಗಿ ಎಲ್ಲಾ ಸಮುದಾಯದ ಸ್ವಾಮೀಜಿಗಳ ಜೊತೆಗೆ ಪ್ರೀತಿ, ಸಹಬಾಳ್ವೆ ಹೊಂದಿದ್ದಾರೆ. ನಾವೆಲ್ಲರೂ ಒಂದೇ ಎನ್ನುವ ಸಹಬಾಳ್ವೆಯಿಂದ ಇದ್ದೇವೆ’ ಎಂದರು.
ಪೂರ್ಣಾನಂದ ಭಾರತಿ ಸ್ವಾಮೀಜಿ, ಷಡಾಕ್ಷರಮುನಿ ಸ್ವಾಮೀಜಿ, ಶಿವಲಿಂಗಾನಂದ ಶ್ರೀ, ಬಸವ ಹರಳಯ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ.ರಘುಮೂರ್ತಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಂ.ಶಿವಣ್ಣ, ತಿಮ್ಮರಾಯಪ್ಪ, ಎಸ್.ಕೆ.ಬಸವರಾಜನ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು, ಮುಖಂಡರಾದ ಮಂಜುನಾಥ್ ಹೂಡಿ, ಈ.ಶಂಕರ್ ಇದ್ದರು.
ಬಸವಮೂರ್ತಿ ಮಾದಾಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ಶಿಕ್ಷಕರಾದ ಟಿ.ಬಸವರಾಜಪ್ಪ, ಮಸ್ರತ್‍ನಾಜ್ ಬೇಗಂ, ಡಿ.ಟಿ.ವೆಂಕಟೇಶ್‍ರೆಡ್ಡಿ, ಎಚ್.ಎಸ್.ಲಲಿತಮ್ಮ, ಬಸವರಾಜಪ್ಪ, ಎ.ಆರ್.ಶಿವಮೂರ್ತಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಭಾರತ ಮಾತೆಯ ಆರಾಧನೆ: ಯದುವೀರ್ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಮಾತನಾಡಿ ‘ಸಂವಿಧಾನದ ತತ್ವಗಳ ಆಚರಣೆಯ ಮೂಲಕ ಭಾರತ ಮಾತೆಯ ಆರಾಧನೆಯನ್ನು ಮಾಡಬೇಕಿದೆ. ದೇವಾಲಯ ನಿರ್ಮಾಣದ ಮೂಲಕ ಕಲೆ ಸಂಸ್ಕೃತಿ ಬೆಳೆಯುತ್ತಿದೆ. ದೇವಾಲಯಗಳ ಪುನರುಜ್ಜೀವನಕ್ಕೂ ಆದ್ಯತೆ ನೀಡಬೇಕು. ಚಿತ್ರದುರ್ಗ ಜಿಲ್ಲೆಗೂ ಮೈಸೂರು ಆರಮನೆಗೂ ಅವಿನಭಾವ ಸಂಬಂಧವಿದೆ. ನಮ್ಮ ಹಿರಿಯರು ಜನತೆಯ ಕಲ್ಯಾಣಕ್ಕಾಗಿ ಎರಡು ಕಡೆಗಳಲ್ಲಿ ಜಲಾಶಯಗಳನ್ನು ನಿರ್ಮಾಣ ಮಾಡಿದ್ದಾರೆ’ ಎಂದರು. ‘ಹಿಂದುಳಿದ ಜನಾಂಗಕ್ಕೆ ಅನ್ಯಾಯವಾದಾಗ ಅಲ್ಲಿ ಮಹಾರಾಜರು ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಶೋಷಿತರಿಗೆ ಮೀಸಲಾತಿಯನ್ನು ನೀಡುವುದರ ಮೂಲಕ ಅವರು ಮುಖ್ಯವಾಹಿನಿಗೆ ಬರಲು ನೆರವಾದರು. ಇದ್ದಲ್ಲದೆ ಮಹರಾಜರು ಸಂವಿಧಾನ ರೂಪು ರೇಷೆಗಳನ್ನು ಜಾರಿ ಮಾಡಿದ್ದರು. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವಂತೆ ಸಂವಿಧಾನದಲ್ಲಿಯೂ ಆಗಾಗ ತಿದ್ದುಪಡಿ ಮಾಡುವ ಮೂಲಕ ಈಗಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಜಾರಿ ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.