ADVERTISEMENT

ಚಿತ್ರದುರ್ಗ: ಇನ್ನೊಂದು ವಾರ ಸಂಯಮ ಕಾಪಾಡುವಂತೆ ಎಸ್‌ಪಿ ಜಿ.ರಾಧಿಕಾ ಮನವಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST
ಜಿ.ರಾಧಿಕಾ
ಜಿ.ರಾಧಿಕಾ   

ಚಿತ್ರದುರ್ಗ: ಕೊರೊನಾ ಸೋಂಕಿನ ಕೊಂಡಿ ತುಂಡರಿಸಲು ಸರ್ಕಾರ ಘೋಷಣೆ ಮಾಡಿದ 21 ದಿನಗಳ ಲಾಕ್‌ಡೌನ್‌ ಏ.14ಕ್ಕೆ ಅಂತ್ಯವಾಗಲಿದೆ. ಇನ್ನೂ ಒಂದು ವಾರ ಮನೆಯಲ್ಲೇ ಇರುವ ಮೂಲಕ ಸಾರ್ವಜನಿಕರು ಸಂಯಮ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕವಷ್ಟೇ ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಸಾಧ್ಯ. ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಪೂರೈಕೆ ಮಾಡಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಅವಶ್ಯಕ ವಸ್ತುಗಳ ಖರೀದಿಗೆ ಮುಗಿಬೀಳುವ ಅಗತ್ಯವಿಲ್ಲ. ಮನೆಯಲ್ಲೇ ಇದ್ದಷ್ಟು ಸುರಕ್ಷಿತವಾಗಿರಲು ಸಾಧ್ಯ ಎಂದು ಹೇಳಿದರು.

ಎರಡು ವರ್ಷ ಜೈಲು:ಲಾಕ್‌ಡೌನ್‌ ನಿಯಮಗಳನ್ನು ಮೀರಿ ರಸ್ತೆಗೆ ಇಳಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈವರೆಗೆ 274 ಪ್ರಕರಣಗಳನ್ನು ದಾಖಲಿಸಿ, 634 ಜನರನ್ನು ಬಂಧಿಸಲಾಗಿದೆ. 490ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್‌ಡೌನ್‌ ನಿಯಮ ಉಲ್ಲಂಘನೆ ಸಾಬೀತಾದರೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಾಹನ ಮರಳಿ ಕೈಸೇರುವುದು ಕಷ್ಟ. ಜಾಲಿ ರೈಡ್‌ ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನಾಲ್ವರು ಡಿವೈಎಸ್‌ಪಿ, 15 ಪೊಲೀಸ್‌ ಇನ್‌ಸ್ಪೆಕ್ಟರ್‌, 28 ಪಿಎಸ್‌ಐ ಸೇರಿ ಸಾವಿರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ ಕಾರ್ಯದಲ್ಲಿ ನಿರತರಾಗಿದ್ದೇವೆ. ನಿತ್ಯ ನಸುಕಿನಲ್ಲಿ ರೈತರು ಮಾರುಕಟ್ಟೆಗೆ ತರಕಾರಿ ತರುವುದರಿಂದ ಬೆಳಿಗ್ಗೆ 3ರಿಂದ ಪೊಲೀಸರ ಕರ್ತವ್ಯ ಆರಂಭವಾಗುತ್ತದೆ. ಜನಸಂದಣಿ ಪ್ರದೇಶ ಪತ್ತೆ ಮಾಡಲಾಗಿದ್ದು, ಹಲವೆಡೆ ನಾಕಾಬಂದಿ ಹಾಕಲಾಗಿದೆ’ ಎಂದು ಹೇಳಿದರು.

32 ಚೆಕ್‌ಪೋಸ್ಟ್‌:ಚಿತ್ರದುರ್ಗ ಗಡಿಯನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಆಂಧ್ರಪ್ರದೇಶದ ಗಡಿಯಲ್ಲಿ 8, ತುಮಕೂರು, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು ಗಡಿಯಲ್ಲಿ 8 ಸೇರಿ 32 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ನಿಗಾ ಇಡಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಜನ ಮತ್ತು ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರಕು ಮತ್ತು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೊರ ಜಿಲ್ಲೆಗೆ ಭೇಟಿ ನೀಡಿಬರುವ ಸರಕು ಸಾಗಣೆ ವಾಹನ ಚಾಲಕರ ಮೇಲೆಯೂ ನಿಗಾ ಇಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿವಳಿಕೆ ನೀಡಲಾಗಿದೆ. ಹಳ್ಳಿಗಳಿಗೆ ತೆರಳದಂತೆ ತಾಕೀತು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ನೌಕರರ ಒಂದು ದಿನದ ವೇತನ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಅಸಮ್ಮತಿ ಸೂಚಿಸಿ 50ಕ್ಕೂ ಹೆಚ್ಚು ಪೊಲೀಸರು ಪತ್ರ ಬರೆದಿದ್ದಾರೆ. ವೇತನ ಕಡಿತಕ್ಕೆ ಅವರು ಸಮ್ಮತಿ ಸೂಚಿಸಿಲ್ಲ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಇದ್ದರು.

ನಿಜಾಮುದ್ದೀನ್‌: ಗೊಂದಲ ನಿವಾರಣೆ
ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲಿಕ್‌ ಜಮಾತ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯಿಂದ ಪಾಲ್ಗೊಂಡಿದ್ದ ಪ್ರತಿನಿಧಿಗಳಿಗೆ ಸಂಬಂಧಿಸಿದ ಗೊಂದಲಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ನಿವಾರಿಸಿದರು.

‘ತಬ್ಲಿಕ್‌ ಜಮಾತ್‌ನೊಂದಿಗೆ ಸಂಪರ್ಕ ಇರುವವರು ಜಿಲ್ಲೆಯಲ್ಲಿ 63 ಜನರಿದ್ದಾರೆ. ಆದರೆ, ನಿಜಾಮುದ್ದೀನ್‌ ಪ್ರದೇಶದ ತಬ್ಲಿಕ್‌ ಜಮಾತ್‌ಗೆ ತೆರಳಿದ್ದವರು ಆರು ಜನ ಮಾತ್ರ. ಉಳಿದವರು ಅಹಮದಾಬಾದ್‌ ಹಾಗೂ ಸೂರತ್‌ ಜಮಾತ್‌ ಜೊತೆ ಸಂಪರ್ಕದಲ್ಲಿದ್ದರು’ ಎಂದು ವಿವರಿಸಿದರು.

ಐದು ಪ್ರಕರಣ ದಾಖಲು
ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದ ಆರೋಪದ ಮೇಲೆ ಧಾರ್ಮಿಕ ಸಂಸ್ಥೆಗಳ ವಿರುದ್ಧ ಐದು ಪ್ರಕರಣ ದಾಖಲಿಸಲಾಗಿದೆ ಎಂದು ರಾಧಿಕಾ ಮಾಹಿತಿ ನೀಡಿದರು.

ಧಾರ್ಮಿಕ ಸ್ಥಳಗಳ ನಿರ್ವಹಣೆಗೆ ನಾಲ್ಕು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿಗಿಂತ ಹೆಚ್ಚು ಜನರು ಇರುವ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆ ಧಿಕ್ಕರಿಸಿದ ಐದು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಸ್ಥಳಗಳಿಗೆ ಭಕ್ತರು ಭೇಟಿ ನೀಡುವ ಬದಲು ಮನೆಯಲ್ಲೇ ಇರುವುದು ಒಳಿತು ಎಂದು ಹೇಳಿದರು.

*
ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕಾನೂನು ಬಾಹಿರ. ಹೀಗೆ, ತೊಂದರೆ ನೀಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಜಿ.ರಾಧಿಕಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.