ADVERTISEMENT

ನಾಯಕತ್ವದ ಗುಣ ವೃದ್ಧಿಗೆ ಕ್ರೀಡೆ ಸಹಕಾರಿ: ಬಸವ ಕುಮಾರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:49 IST
Last Updated 19 ಸೆಪ್ಟೆಂಬರ್ 2025, 5:49 IST
   

ಚಿತ್ರದುರ್ಗ: ‘ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ನಿಭಾಯಿಸುವ ಕಲೆಗಾರಿಕೆ ಬೆಳೆಯುತ್ತದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸ್ನೇಹ, ಸೌಹಾರ್ದತೆ ,ಪ್ರೀತಿ, ವಿಶ್ವಾಸ, ಸಹನಾಶೀಲತೆಗೆ ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯನ್ನು ನಿರ್ಮಿಸುತ್ತವೆ’ ಎಂದರು.

ADVERTISEMENT

‘ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಕ್ರೀಡೆಯಲ್ಲಿ ಶಿಸ್ತು ಪಾಲಿಸುವುದು ಮುಖ್ಯ. ಫಲಿತಾಂಶದ ಬಗ್ಗೆ ಯೋಚಿಸದೆ ಉತ್ಸಾಹದಿಂದ ಭಾಗವಹಿಸಬೇಕು’ ಎಂದು ತಿಳಿಸಿದರು.

‘ಒಬ್ಬ ವ್ಯಕ್ತಿ ಪರಿಪೂರ್ಣವಾಗಲು ಪಠ್ಯದ ಜೊತೆಗೆ ಮಾನಸಿಕವಾಗಿ, ದೈಹಿಕವಾಗಿ ಸದೃಢಗೊಳ್ಳಬೇಕು. ಆಗ ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಸತತ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ. ಇದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು’ ಎಂದು ತಿಳಿಸಿದರು.

‘ಎರಡು ದಿನ ನಡೆಯುವ ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯಬೇಕು. ಅಲ್ಲಿಯೂ ಸಹ ಗೆಲುವು ಸಾಧಿಸಿ ಚಿತ್ರದುರ್ಗದ ಹೆಸರನ್ನು ಬೆಳಗಬೇಕು. ಆದರೆ ಸ್ಪರ್ಧಾ ಮನೋಭಾವ ಸದಾ ಜಾಗೃತವಾಗಿರಬೇಕು’ ಎಂದರು.

‘ಆಸಕ್ತಿ ಇರುವವರು ಮಾತ್ರ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರು ಸೂಕ್ತ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ತಿಳಿಸಿದರು.

‘ಕ್ರೀಡೆ ಎನ್ನುವುದು ಬರೀ ಪದಕ ಗೆಲುವುದಕ್ಕೆ ಮಾತ್ರ ಎಂದು ಕೊಂಡರೆ ತಪ್ಪಾಗುತ್ತದೆ. ಅದು ನಮ್ಮ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂಬುದನ್ನು ಮರೆಯಬಾರದು. ಪ್ರಸ್ತುತ ದಿನದಲ್ಲಿ ಪ್ರತಿ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಭಾಗವಹಿಸುವುದನ್ನು ಕಾಣುತ್ತಿದ್ದೇವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲು ಸೌಲಭ್ಯವಿದೆ. ಇದರ ಸದುಪಯೋಗ ನಿಮ್ಮದಾಗಲಿ’ ಎಂದರು.

‘ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಕ್ರೀಡಾ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಕೆ.ತಿಮ್ಮಯ್ಯ ತಿಳಿಸಿದರು.

‘ಪಠ್ಯದ ಜೊತೆ ಪಠ್ಯೇತರ ವಿಷಯವಾದ ಕ್ರೀಡೆ ಮಕ್ಕಳ ದೈಹಿಕ ಆರೋಗ್ಯ ಕಾಪಾಡುತ್ತದೆ. ಜೊತೆಗೆ ಸ್ಪರ್ಧಾ ಮನೋಭಾವನೆ ಹಾಗೂ ಆಸಕ್ತಿ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಪ್ರಯತ್ನಿಸುವುದನ್ನು ಮಾತ್ರ ನಿಲ್ಲಿಸಬಾರದು. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಕ್ರೀಡೆಯಲ್ಲಿ ಸದಾ ಮುಂದವರೆಯಬೇಕು’ ಎಂದು ಪ್ರಾಂಶುಪಾಲರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಂ.ಜಿ. ರಾಜೇಶ್‌ ತಿಳಿಸಿದರು.

ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್‌. ಮಲ್ಲೇಶ್‌, ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಪ್ರಾಂಶುಪಾಲರಾದ ಇ. ಗುರುಮೂರ್ತಿ, ಶಬ್ಬೀರ್‌ ಅಹಮ್ಮದ್ ಖಾನ್‌, ಕ್ರೀಡಾ ಸಂಚಾಲಕ ರಂಗಪ್ಪ ಇದ್ದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ತೀರ್ಪುಗಾರರು ಪೂರ್ವಗ್ರಹ ಪೀಡಿತರಾಗದೆ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡಬೇಕು. ಈ ಮೂಲಕ ಈ ಜಿಲ್ಲೆಯ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸಬೇಕು.
ಕೆ.ತಿಮ್ಮಯ್ಯ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.