ADVERTISEMENT

ಬಂದ್‌ಗೆ ಬೆಂಬಲಿಸಿ; ಬಿಜೆಪಿ ತೊಲಗಿಸಿ: ಕಾಂಗ್ರೆಸ್ ಮುಖಂಡ ಸಿ.ಶಿವುಯಾದವ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 13:38 IST
Last Updated 26 ಸೆಪ್ಟೆಂಬರ್ 2020, 13:38 IST
ಸಿ.ಶಿವುಯಾದವ್
ಸಿ.ಶಿವುಯಾದವ್   

ಚಿತ್ರದುರ್ಗ: ಸುಗ್ರೀವಾಜ್ಞೆ ಮೂಲಕ ಜನವಿರೋಧಿ ಕಾಯ್ದೆ ಜಾರಿಗೊಳಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ತೊಲಗಿಸಲು ದೇಶವಾಸಿಗಳಾದ ಜಿಲ್ಲೆಯ ಜನತೆ ರಾಜ್ಯ ಬಂದ್‌ಗೆ ಬೆಂಬಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿ.ಶಿವುಯಾದವ್‌ ಮನವಿ ಮಾಡಿದ್ದಾರೆ.

‘ಈ ಸರ್ಕಾರಗಳು ರೈತ, ಕಾರ್ಮಿಕ ಹಾಗೂ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿ, ಜನರನ್ನು ಸಂಕಷ್ಟಕ್ಕೆ ನೂಕುತ್ತಿವೆ. ಇದನ್ನು ಒಕ್ಕೊರಲಿನಿಂದ ಖಂಡಿಸಿ, ಬೀದಿಗಿಳಿದು ಪ್ರತಿಭಟಿಸುವ ಕಾಲ ಬಂದಿದೆ. ಅದಕ್ಕೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಉತ್ತಮ ಅವಕಾಶ ಒದಗಿಸಿಕೊಟ್ಟಿವೆ’ ಎಂದು ತಿಳಿಸಿದ್ದಾರೆ.

‘ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಯಿಂದಾಗಿ ದೇಶ ಮತ್ತು ರಾಜ್ಯ ಅಸ್ಥಿರ, ಅರಾಜಕತೆಯತ್ತ ಸಾಗಿದ್ದು, ವಿನಾಶದ ಅಂಚಿಗೆ ತಳ್ಳಿವೆ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ರಾಷ್ಟ್ರದ ಆಸ್ತಿ-ಪಾಸ್ತಿಯನ್ನು ಕಾನೂನು ಬಾಹಿರವಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಹಾಗೂ ವಿದ್ಯುಚ್ಛಕ್ತಿ ಕಾಯ್ದೆಗಳ ತಿದ್ದುಪಡಿಯನ್ನು ಚರ್ಚೆಗೆ ಅವಕಾಶ ನೀಡದೆಯೇ ಅಸಂಸದೀಯ ವ್ಯವಸ್ಥೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸಿರುವ ಕ್ರಮ ಖಂಡಿಸಿ ನಡೆಯುತ್ತಿರುವ ಬಂದ್‌ಗೆ ಕಾಂಗ್ರೆಸ್‌ ಬೆಂಬಲಿಸುತ್ತಿದ್ದು, ಜಿಲ್ಲೆಯ ಜನತೆ ಸಹಕರಿಸುವ ಅಗತ್ಯವಿದೆ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.