
ಚಿತ್ರದುರ್ಗ: ಸ್ವದೇಶಿ ಜಾಗರಣಾ ಮಂಚ್ ನೇತೃತ್ವದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳಕ್ಕೆ ನಿರೀಕ್ಷೆ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಕೇವಲ 2 ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ಧಾರೆ. ಮಿಕ್ಕ ದಿನಗಳಲ್ಲಿ ಇನ್ನೂ 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ’ ಎಂದು ಮೇಳದ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
‘ಮೇಳದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಒಂದು ದಾಖಲೆಯಾಗಿದೆ. ಇಲ್ಲಿಯವರೆಗೂ ನಡೆದಿರುವ ಸಮಾವೇಶಗಳು ಯಶಸ್ವಿಯಾಗಿವೆ. ಶುಕ್ರವಾರ ದೇಸಿ ಆಟ ಕಬಡ್ಡಿ ಕ್ರೀಡಾಕೂಟ (ಸ್ವದೇಶ ಕಪ್) ಆರಂಭವಾಗಿದೆ. ದೇಸಿ ವಸ್ತುಗಳನ್ನು ಉತ್ಪಾದನೆ ಮಾಡುವ ಸಣ್ಣ ಪುಟ್ಟ ವ್ಯಾಪಾರಿಗಳು, ದೇಸಿ ವಸ್ತುಗಳ ಉತ್ಪಾದಕರಿಗೆ ಒಳ್ಳೆಯ ವಹಿವಾಟು ನಡೆಯುತ್ತಿದೆ’ ಎಂದು ಅವರು ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
‘ಮೇಳದಲ್ಲಿ ರಕ್ತದಾನ ಶಿಬಿರ, ಮಹಿಳಾ ಸಮಾವೇಶ, ಯುವ ಸಮಾವೇಶ ನಡೆದಿದ್ದು, ಶನಿವಾರ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರೈತ ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದು, ಹೊಸದುರ್ಗ ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ರೈತ ಸಾಧಕರಾದ ಕೂಡ್ಲಿಗಿ ವಿಶ್ವೇಶ್ವರ ಸಜ್ಜನ್, ಅರಸೀಕೆರೆ ರಘು, ದೊಡ್ಡಸಿದ್ದವ್ವನಹಳ್ಳಿ ಜ್ಞಾನೇಶ್ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದರು.
‘ಸ್ವದೇಶಿ ಮೇಳದಲ್ಲಿ ಆರೋಗ್ಯ ಇಲಾಖೆ, ರೆಡ್‌ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. 40 ಬಾರಿ ರಕ್ತದಾನ ಮಾಡಿರುವ ಕೆಎಸ್‌ಆರ್‌ಟಿಸಿ ಉದ್ಯೋಗಿ ನಟರಾಜ್ ಶಿಬಿರವನ್ನು ಉದ್ಘಾಟಿಸಿದ್ದಾರೆ. ಆಯುರ್ವೇದ ಚಿಕಿತ್ಸಾ ಶಿಬಿರದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಅನುಕೂಲ ಪಡೆದುಕೊಂಡಿದ್ದಾರೆ’ ಎಂದರು.
ಸ್ವದೇಶಿ ಜಾಗರಣಾ ಮಂಚ್ ಮುಖ್ಯಸ್ಥ ಜಗದೀಶ್ ಮಾತನಾಡಿ ‘ಸರ್ಕಾರದ ಸಹಾಯವಿಲ್ಲದೆ, ಜನರ ಸಹಕಾರದಿಂದ ಸ್ವದೇಶಿ ಮೇಳ ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ ಇದನ್ನು ನಡೆಸುವುದು ಕಷ್ಟ. ಸ್ಥಳೀಯರು ಮುಂದಾದರೆ ಸಂಘಟನೆ ಜೊತೆಗೆ ನಿಲ್ಲಲಿದೆ. ವ್ಯಾಪಾರಿಗಳಿಗೆ ಗ್ರಾಹಕರನ್ನು ಜೋಡಿಸುವ ಕೆಲಸವನ್ನು ಸ್ವದೇಶಿ ಜಾಗರಣಾ ಮಂಚ್ ಮಾಡುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಚಿತ್ರದುರ್ಗದಲ್ಲೂ ಯಶಸ್ವಿಯಾಗಿದೆ’ ಎಂದರು.
’ರೈತರ ಉತ್ಪನ್ನಗಳಿಗೆ ಕಾರ್ಪೋರೇಟ್ ಬೇಡಿಕೆ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ನಂದಿನಿ, ಕ್ಯಾಂಪ್ಕೋ, ಕದಂಬ ಸಂಸ್ಥೆಗಳಂತೆ ರೈತರು ಸಹಕಾರಿಗಳಾಗಿ ಒಂದಾಗಿ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳಬೇಕು. ಏಕಬೆಳೆ ಪದ್ಧತಿ ಅಪಾಯಕಾರಿಯಾಗಿದ್ದು, ಅದರಿಂದ ಅಂತರ ಕಾಯ್ದುಕೊಂಡು, ಬೇಡಿಕೆಗೆ ಅನುಗುಣವಾಗಿ ಭೂಮಿ ಮತ್ತು ರೈತನ ಜೇಬಿಗೆ ಹೊರೆಯಾಗದಂತಹ ಬೆಳೆಗಳನ್ನು ಬೆಳೆಯಬೇಕು’ ಎಂದರು.
ಸಂವಾದದಲ್ಲಿ ಸಹ ಸಂಚಾಲಕರಾದ ಜಿ.ಎಂ.ಅನಿತ್ ಕುಮಾರ್, ಸೌಭಾಗ್ಯ ಬಸವರಾಜನ್, ಬಿ.ಸಿ.ಹನುಮಂತೇಗೌಡ, ಕೆ.ಟಿ.ಕುಮಾರಸ್ವಾಮಿ, ರವೀಂದ್ರ, ನಾಗರಾಜ್ ಬೇದ್ರೆ ಇದ್ದರು.
ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ಆಂಬುಲೆನ್ಸ್ ಜೊತೆಗೆ ವೈದ್ಯರ ತಂಡ ಸೇವೆಯಲ್ಲಿದ್ದಾರೆ. ಪೊಲೀಸರು ಭದ್ರಗೆ ಒದಗಿಸಿದ್ದಾರೆಕೆ.ಎಸ್.ನವೀನ್ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.