ADVERTISEMENT

ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 14:49 IST
Last Updated 30 ನವೆಂಬರ್ 2020, 14:49 IST

ಚಿತ್ರದುರ್ಗ: ಲಂಚದ ಬೇಡಿಕೆ ಮತ್ತು ಪಡೆದ ಆರೋಪದ ಮೇರೆಗೆ ಮೊಳಕಾಲ್ಮುರು ತಹಶೀಲ್ದಾರ್ ಮಲ್ಲಿಕಾರ್ಜುನ ಹಾಗೂ ಕೋನಸಾಗರ ಪಿರ್ಕ ಗ್ರಾಮಲೆಕ್ಕಾಧಿಕಾರಿ ಉಮೇಶ್ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಹಶೀಲ್ದಾರ್ ಸೂಚನೆ ಮೇರೆಗೆ ಉಮೇಶ್ಪಂಚಾಕ್ಷರಿ ಬಿ. ರಾಥೋಡ್ ಎಂಬುವವರಿಂದ ₹ 2ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿಡಿವೈಎಸ್‌ಪಿ ಎಚ್.ಎಸ್. ಪರಮೇಶ್ವರಪ್ಪ, ಇನ್‌ಸ್ಪೆಕ್ಟರ್‌ ಚೈತನ್ಯ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

‘ಚಳ್ಳಕೆರೆಯಿಂದ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗದ ಅಭಿವೃದ್ಧಿ ಸಂಬಂಧ ದಿಲೀಪ್‌ ಬಿಲ್ಡ್‌ಕಾನ್‌ ಗುತ್ತಿಗೆ ಪಡೆದಿದೆ. ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲು ಎನ್‌ಒಸಿ ಪಡೆಯಬೇಕು. ಅದಕ್ಕಾಗಿ ಗುತ್ತಿಗೆದಾರರು ಮೊಳಕಾಲ್ಮುರು ತಹಶೀಲ್ದಾರ್ ಬಳಿ ಬಂದಾಗ ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರು ದಾಖಲಾಗಿದೆ’ ಎಂದು ಎಸಿಬಿ ದಾವಣಗೆರೆ ಪೂರ್ವವಲಯದ ಎಸ್‌ಪಿ ಜಯಪ್ರಕಾಶ್ ತಿಳಿಸಿದ್ದಾರೆ.

ADVERTISEMENT

‘ಲಂಚದ ಹಣಕ್ಕಾಗಿ ಪ್ರೀತಮ್ ಎಂಬುವವರನ್ನು ತಹಶೀಲ್ದಾರ್ ಪದೇ ಪದೇ ಪೀಡಿಸಿದ್ದಾರೆ. ₹ 15 ಲಕ್ಷದಲ್ಲಿ ₹ 8 ಲಕ್ಷವನ್ನು ಈಗಾಗಲೇ ಪಡೆದಿದ್ದಾರೆ. ಉಳಿದ ₹ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹ 2 ಲಕ್ಷ ತಹಶೀಲ್ದಾರ್ ಪರವಾಗಿ ಪಡೆಯುವ ವೇಳೆ ಉಮೇಶ್‌ ಸಿಕ್ಕಿಬಿದ್ದಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.