ADVERTISEMENT

ಧರ್ಮಪುರ: ಕಣ್ತೆರೆದು ನೋಡುವವರಿಲ್ಲದ ಕಣಜನಹಳ್ಳಿ ಸ್ಮಾರಕ!

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 6:00 IST
Last Updated 13 ಜೂನ್ 2025, 6:00 IST
ಧರ್ಮಪುರ ಸಮೀಪದ ಕಣಜನಹಳ್ಳಿಯ ಐತಿಹಾಸಿಕ ಬತೇರಿ
ಧರ್ಮಪುರ ಸಮೀಪದ ಕಣಜನಹಳ್ಳಿಯ ಐತಿಹಾಸಿಕ ಬತೇರಿ   

ಧರ್ಮಪುರ: ಮಾನವನ ದುರಾಸೆ, ಅಭಿವೃದ್ಧಿಯ ಹಪಾಹಪಿಯಿಂದಾಗಿ ಇತಿಹಾಸ ಪ್ರಸಿದ್ಧವಾಗಿರುವ, ಸಮೀಪದ ಕಣಜನಹಳ್ಳಿಯ ಐತಿಹಾಸಿಕ ಸ್ಮಾರಕ, ಕುರುಹುಗಳು ಸಂರಕ್ಷಣೆಯ ಕೊರತೆಯಿಂದ ಸೊರಗುತ್ತಿವೆ.

ನೊಳಂಬ, ವಿಜಯನಗರ, ಹರತಿ ನಾಯಕರು, ನಿಡಗಲ್, ಚಿತ್ರದುರ್ಗ, ವೇಣುಕಲ್ಲುಗುಡ್ಡ ಪಾಳೆಗಾರರ ಕಾಲದ ಸ್ಮಾರಕಗಳು ಈ ಭಾಗದಲ್ಲಿ ಇತಿಹಾಸವನ್ನು ಸಾರಿ ಹೇಳುತ್ತಿವೆ. ಕಣಜನಹಳ್ಳಿ ಐತಿಹಾಸಿಕ ಸ್ಮಾರಕಗಳ ತವರಿನಂತಿದೆ. ನಿಡಗಲ್ ಮತ್ತು ಹರ್ತಿಕೋಟೆ ಪಾಳೆಗಾರರ ಸಂಬಂಧದ ದ್ಯೋತಕವಾಗಿರುವ ಕಣಜನಹಳ್ಳಿಯಲ್ಲಿ ಕಣಜ ಮತ್ತು ಅಗೇವ ಹೇರಳವಾಗಿವೆ.

ಧನ, ಧಾನ್ಯ, ಸಂಪತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಭೂಮಿಯ ಒಳಗಡೆ ಕಣಜ ನಿರ್ಮಾಣ ಮಾಡಿಕೊಂಡಿದ್ದರಿಂದ ಈ ಗ್ರಾಮಕ್ಕೆ ಕಣಜನಹಳ್ಳಿ ಎಂಬ ಹೆಸರು ಬಂದಿದೆ. ಇದು ಮೂರು ಊರ ಬಾಗಿಲು ಇದ್ದು, ಗ್ರಾಮದ ಸುತ್ತಲೂ 10 ಅಡಿ ಎತ್ತರದಲ್ಲಿ ಕೋಟೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಪಕ್ಕದಲ್ಲಿ ದೊಡ್ಡ ಹಳ್ಳವಿದ್ದು, ಶತ್ರುಗಳು ಕೋಟೆ ಏರಿ ಬಾರದಂತೆ ತಡೆಯಲು 8 ಅಡಿ ಆಳವಾದ ಕಂದಕ ನಿರ್ಮಾಣ ಮಾಡಲಾಗಿದೆ.

ADVERTISEMENT

‘ಕೋಟೆಯ ಒಳಗಡೆ ಮತ್ತು ಹೊರಗಡೆ ಆಂಜನೇಯ ದೇವಸ್ಥಾನಗಳಿರುವುದು ಕರ್ನಾಟಕದ ಇತಿಹಾಸದಲ್ಲಿ ಅಪರೂಪದ್ದು’ ಎಂದು ಸಾಹಿತಿ ಕಣಜನಹಳ್ಳಿ ನಾಗರಾಜ್ ಹೇಳುತ್ತಾರೆ.

ದ್ವಾರ ಬಾಗಿಲು

ಗ್ರಾಮದ ಮಧ್ಯ ಭಾಗದಲ್ಲಿರುವ, ‘ಕಾವಲು ಶಿಖರ’ ಎಂದು ಕರೆಯಲಾಗುವ ಬತೇರಿ ಆಕರ್ಷಕವಾಗಿದ್ದು, ಇದು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ಬತೇರಿ. ಇದರ ಮೇಲೆ ಐದು ಅಡಿ ಪ್ರಾಕಾರದ ಗೋಡೆ ಮತ್ತು ಪೌಳಿ ಇದೆ. ಕೆಳ ಭಾಗದಲ್ಲಿ ಬಾವಿ ಇದೆ. ಬತೇರಿ ಮೇಲೆ ನಿಂತುಕೊಂಡರೆ ಅಂದಾಜು ಮೂರು ಕಿ.ಮೀ.ವರೆಗೆ ದೃಷ್ಟಿ ಹಾಯಿಸಬಹುದು. ಬತೇರಿ ಮೇಲೆ ಕಣಜವಿದ್ದು, ಇಲ್ಲಿ ಅಪಾರ ಪ್ರಮಾಣದಲ್ಲಿ ಮದ್ದು, ಗುಂಡು ಶಸ್ತ್ರಾಸ್ತ್ರಗಳು ಮತ್ತು ಬಂಗಾರವನ್ನು ಸಂಗ್ರಹಿಸಿರಬಹುದು. ಅದಕ್ಕಾಗಿ ಭೂ ಉತ್ಖನನ ನಡೆಯಬೇಕಾಗಿದೆ ಎನ್ನುವುದು ಇತಿಹಾಸ ಸಂಶೋಧಕರ ಅಭಿಪ್ರಾಯವಾಗಿದೆ.

ಗ್ರಾಮದ ದ್ವಾರದ ಬಲ ಭಾಗದಲ್ಲಿ ವೀರಗಲ್ಲು ಇದ್ದು, ಅದರ ಮೇಲ್ಭಾಗದಲ್ಲಿ ಹಳಗನ್ನಡದಲ್ಲಿ ಶಾಸನವಿದೆ. ಇದು ನೊಳಂಬರ ಇತಿಹಾಸ ತಿಳಿಯಲು ಇಂಬು ಕೊಡುತ್ತದೆ. ವಿಜಯನಗರ ಪತನಾನಂತರ ಮದಕರಿ ನಾಯಕನ ಆಳ್ವಿಕೆಗೆ ಒಳಪಟ್ಟಿತು. ಸಂಡೂರಿನ ಘೋರ್ಪಡೆ ವಂಶದವರ ಆಡಳಿತದಲ್ಲಿ ದಿವಾನರಾಗಿದ್ದ ವೆಂಕಟರಾವ್ ಅವರ ಕಾಲದಲ್ಲಿ ಇಲ್ಲಿನ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಕೈಗೊಂಡಿದ್ದರ ಬಗ್ಗೆ ಜಾನಪದ ಗೀತೆಗಳಲ್ಲಿ ಉಲ್ಲೇಖ ಇದೆ.

‘ಐತಿಹಾಸಿಕ ಸ್ಮಾರಕಗಳು ಇತಿಹಾಸ ಆಸಕ್ತರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಆಕರವಾಗಿದ್ದ ಕಣಜನಹಳ್ಳಿ ಈಗ ಸಂಪೂರ್ಣವಾಗಿ ಸಂರಕ್ಷಣೆ ಇಲ್ಲದೆ ಅಳಿವಿನ ಅಂಚಿನಲ್ಲಿರುವುದು ದುರದೃಷ್ಟಕರ. ಆದರೆ, ಅವುಗಳ ಸಮರ್ಪಕ ರಕ್ಷಣೆ ಇಲ್ಲದಿರುವುದರಿಂದ ಮುಂದಿನ ಪೀಳಿಗೆಗೆ ನೆನಪು ಮಾತ್ರ ಆಗಿವೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಕೋಟೆಯ ಕಲ್ಲುಗಳನ್ನು ಕಿತ್ತೊಯ್ದಿರುವುದು

‘ವಿದ್ಯಾರ್ಥಿ ದೆಸೆಯಲ್ಲಿದ್ದ ಸಂದರ್ಭದಲ್ಲಿ ಕಣಜನಹಳ್ಳಿ ಬತೇರಿ, ಬುರುಜು ಮತ್ತು ಸ್ಮಾರಕಗಳನ್ನು ನೋಡಲು ಹೋಗುತ್ತಿದ್ದೆವು. ಆದರೆ, ಈಗ ಅವೆಲ್ಲಾ ಅವಸಾನದ ಅಂಚಿನಲ್ಲಿದ್ದು, ತುಂಬಾ ಬೇಸರ ತಂದಿದೆ. ಸ್ಥಳೀಯ ಆಡಳಿತ ಪ್ರಾಚ್ಯ ಸ್ಮಾರಕಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಸ್.ಪ್ರಕಾಶ್ ಒತ್ತಾಯಿಸಿದ್ದಾರೆ.

ಆಂಜನೇಯ ದೇವಸ್ಥಾನ
ನೊಳಂಬರ ಶಾಸನ
ಬುರುಜು ನಾಶವಾಗಿರುವುದು
ಕುಮಾರರಾಮನ ಕಾಲದ್ದು ಎನ್ನಲಾಗುವ ಭಿನ್ನವಾಗಿರುವ ವೀರಗಲ್ಲು

ಕೋಟೆ ಕಲ್ಲಿನಿಂದ ಮನೆ ಕಟ್ಟಿದರು

‘ಐತಿಹಾಸಿಕ ಕಣಜನಹಳ್ಳಿ ಕೋಟೆ ಈಗ ಸಂಪೂರ್ಣವಾಗಿ ನಾಶವಾಗಿದೆ. ಜನರ ದುರಾಸೆಯಿಂದ ಗ್ರಾಮದ ಸುತ್ತಲೂ ಅಂದಾಜು ಒಂದು ಕಿ.ಮೀ.ಯಷ್ಟು ಇದ್ದ ಕೋಟೆಯ ಕಲ್ಲು ಕಿತ್ತು ಆ ಜಾಗದಲ್ಲಿ ನಿವೇಶನ ಮಾಡಿಕೊಂಡು ಅದೇ ಕಲ್ಲಿನಿಂದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಒಟ್ಟು 7 ಬುರುಜುಗಳಿದ್ದವು. ಈಗ ಉಳಿದಿರುವುದು ಒಂದು ಮಾತ್ರ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಬೇಕು’ ಎಂದು ಗ್ರಾಮದ ನಿವಾಸಿ ಕನ್ನಡ ಉಪನ್ಯಾಸಕ ಒ.ಗೌಡ ಆಗ್ರಹಿಸಿದ್ದಾರೆ. ‘ದ್ವಾರಗಳ ಕಲ್ಲನ್ನು ಗ್ರಾಮದವರು ಕಿತ್ತುಕೊಂಡು ಮನೆ ನಿರ್ಮಾಣಕ್ಕೆ ಬಳಸಿಕೊಂಡಿರುವುದರಿಂದ ಈಗಾಗಲೇ ಅದು ಸಂಕೀರ್ಣವಾಗಿದೆ. ಬತೇರಿ ಹತ್ತಿ ಮೇಲೆ ಹೋಗದಂತೆ ಮುಳ್ಳಿನ ಗಿಡಗಳು ಬೆಳೆದಿವೆ. ಬತೇರಿ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಇದರಿಂದ ಬತೇರಿ ಮೇಲೆ ಹೋಗುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ಪ್ರಾಚ್ಯವಸ್ತು ಇಲಾಖೆಯವರಿಗೆ ಮನವಿ ಮಾಡಿದರೂ ಕ್ರಮ ತೆಗೆದುಕೊಂಡಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಲಿ’ ಎಂದು ಕಣಜನಹಳ್ಳಿ ನಾಗರಾಜ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.