ADVERTISEMENT

ಹೊಳಲ್ಕೆರೆ: ಪೊಲೀಸರ ಸೋಗಿನಲ್ಲಿ ಹಣ, ಬಂಗಾರ ದೋಚುತ್ತಿದ್ದ ಆರೋಪಿ ಬಂಧನ

₹ 2.09 ಲಕ್ಷ ಮೌಲ್ಯದ ಆಭರಣ, ಮೊಬೈಲ್ ವಶ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:06 IST
Last Updated 17 ಡಿಸೆಂಬರ್ 2021, 5:06 IST
ರಾಜಶೇಖರ
ರಾಜಶೇಖರ   

ಹೊಳಲ್ಕೆರೆ: ಪೊಲೀಸ್ ಎಂದು ಹೇಳಿಕೊಂಡು ಮೊಬೈಲ್, ಬಂಗಾರದ ಆಭರಣ ಹಾಗೂ ನಗದು ದೋಚುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹ 2.09 ಲಕ್ಷ ಮೌಲ್ಯದ ಮೊಬೈಲ್, ಬಂಗಾರದ ಆಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆಯ ರಾಜಶೇಖರ ಅಲಿಯಾಸ್ ರಾಜ ಬಂಧಿತ ಆರೋಪಿ.

ಡಿ.10ರಂದು ತಾಲ್ಲೂಕಿನ ಈಚಘಟ್ಟ ಹಾಗೂ ಚಿತ್ರಹಳ್ಳಿ ಗೇಟ್ ಮಧ್ಯದಲ್ಲಿ ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಮುರುಳಿ ಎಂಬುವರು ಬೈಕ್ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಆರೋಪಿ ರಾಜಶೇಖರ್, ‘ನಾನು ಪೊಲೀಸ್’ ಎಂದು ಬೆದರಿಸಿ ಮೊಬೈಲ್ ಹಾಗೂ ₹ 1 ಸಾವಿರ ಕಸಿದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿ ಚಿಕ್ಕಜಾಜೂರು, ಶ್ರೀರಾಂಪುರ ಹಾಗೂ ನ್ಯಾಮತಿಯಲ್ಲೂ ಪೊಲೀಸ್ ಸೋಗಿನಲ್ಲಿ ದೋಚಿರುವುದು ಬೆಳಕಿಗೆ ಬಂದಿದೆ.

ADVERTISEMENT

‘ಪೊಲೀಸ್ ಹೇರ್‌ ಕಟಿಂಗ್ ಮಾಡಿಸಿಕೊಂಡಿದ್ದ ರಾಜಶೇಖರ್ ಖಾಕಿ ಡ್ರೆಸ್ ಹಾಕಿಕೊಂಡು ಪೊಲೀಸ್‌ನಂತೆ ವರ್ತಿಸುತ್ತಿದ್ದ. ಬೆಟ್ಟದಲ್ಲಿನ ದೇವಾಲಯಗಳಿಗೆ ಬರುವ ಹುಡುಗ–ಹುಡುಗಿ ಜೋಡಿಯನ್ನು ಟಾರ್ಗೆಟ್ ಮಾಡುತ್ತಿದ್ದ. ನಿಮ್ಮನ್ನು ವಿಚಾರಣೆ ಮಾಡಬೇಕು. ಮೊಬೈಲ್, ಒಡವೆ ಕೊಡಿ ಎಂದು ಬಲವಂತವಾಗಿ ಪಡೆದುಕೊಳ್ಳುತ್ತಿದ್ದ. ನಾನು ಸ್ಟೇಷನ್‌ಗೆ ಮುಂದೆ ಹೋಗಿರುತ್ತೇನೆ. ನೀವು ಹಿಂದೆ ಬನ್ನಿ ಎಂದು ಹೇಳಿ ತಪ್ಪಿಸಿಕೊಂಡು ಹೋಗುತ್ತಿದ್ದ. ಕೆಲವರು ಹೆದರಿ ದೂರು ನೀಡಲು ಮುಂದೆ ಬರುತ್ತಿರಲಿಲ್ಲ. ಈಗ ಆರೋಪಿ ಸಿಕ್ಕಿಬಿದ್ದಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದ್ದಾರೆ.

ಸಿಪಿಐ ರವೀಶ್, ಪಿಎಸ್‌ಐ ವಿಶ್ವನಾಥ್, ಚಿತ್ರಹಳ್ಳಿ ಪಿಎಸ್ಐ ಆಶಾ ಹಾಗೂ ಸಿಬ್ಬಂದಿ ಮಧುಸೂದನ್, ರುದ್ರೇಶ್, ಲೋಕೇಶ್, ತಿಮ್ಮಣ್ಣ, ತಿಮ್ಮೇಶ್, ಕುಮಾರಸ್ವಾಮಿ, ಹಾಲೇಶ್, ರವಿಕುಮಾರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.