ADVERTISEMENT

ಹೊರಗುತ್ತಿಗೆ ನೌಕರರ ವೇತನ ಸಕಾಲಕ್ಕೆ ಸಿಗಲಿ: ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:52 IST
Last Updated 22 ನವೆಂಬರ್ 2025, 6:52 IST
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ನಡೆಯಿತು
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ನಡೆಯಿತು   

ಚಿತ್ರದುರ್ಗ: ‘ಸರ್ಕಾರಿ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನಿಯಮಾನುಸಾರ ವೇತನ ಬಿಡುಗಡೆ ಮಾಡಬೇಕು. ವೇತನ ಬಿಡುಗಡೆಯಲ್ಲಿ ತಡವಾದರೆ ಸಂಬಂಧಿಸಿದ ಏಜೆನ್ಸಿಗಳಿಗೆ ನೋಟಿಸ್‌ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಹೊರಗುತ್ತಿಗೆ ನೌಕರರ ಸೇವೆ ಒದಗಿಸುವ ಏಜೆನ್ಸಿಗಳು ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರೆಯಬೇಕು. ಹಲವು ಏಜೆನ್ಸಿಗಳು ಕಚೇರಿ ತೆರೆಯದೇ ಕೆಲಸ ಮಾಡುತ್ತಿರುವುದು ಖಂಡನೀಯ. ಸರ್ಕಾರದಿಂದ ಅನುದಾನ ಬರುವುದು ತಡವಾದರೂ ನಿಯಮಾನುಸಾರ ನಿಗದಿತ ದಿನಾಂಕದಂದು ನೌಕರರಿಗೆ ವೇತನ ನೀಡುವುದು ಏಜೆನ್ಸಿಗಳ ಜವಾಬ್ದಾರಿಯಾಗಿದೆ. ಈ ವಿಚಾರವನ್ನು ಟೆಂಡರ್ ಬಿಡ್‍ನಲ್ಲಿ ಸಷ್ಟವಾಗಿ ನಮೂದಿಸಲಾಗಿರುತ್ತದೆ’ ಎಂದು ಹೇಳಿದರು. 

ADVERTISEMENT

‘ಯಾವ ಕೆಲಸಕ್ಕಾಗಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆಯೋ ಅದೇ ಕೆಲಸಕ್ಕೆ ಮಾತ್ರ ನೌಕರರನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರವಾಗಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿಬೇಕು. ಆಹಾರ ಗುಣಮಟ್ಟ, ಮಕ್ಕಳ ಆರೋಗ್ಯ, ಶೈಕ್ಷಣಿಕ ಸ್ಥಿತಿಗತಿ ಹಾಗೂ ಹೊರಗುತ್ತಿಗೆ ನೌಕರರ ಅಹವಾಲುಗಳನ್ನು ಆಲಿಸಬೇಕು. ಮಕ್ಕಳು ಹಾಸ್ಟೆಲ್‍ಗಳಲ್ಲಿ ಏಕಾಗ್ರತೆಯಿಂದ ಓದಲು ಅಗತ್ಯವಿರುವ ವಾತಾವರಣ ನಿರ್ಮಿಸಬೇಕು’ ಎಂದರು. 

‘ಖಾಸಗಿ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳಲ್ಲಿ ಮೂಲ ಸೌಕರ್ಯ ಇಲ್ಲದಿದ್ದರೆ ಶೀಘ್ರ ಸೌಲಭ್ಯ ಒದಗಿಸಬೇಕು. ಸೌಲಭ್ಯ ಇಲ್ಲದಿದ್ದರೆ ತಕ್ಷಣ ಕಟ್ಟಡಗಳನ್ನು ಬದಲಿಸಬೇಕು. ಸರ್ಕಾರ ನೀಡಿರುವ ಸವಲತ್ತುಗಳನ್ನು ಮಕ್ಕಳಿಗೆ ತಲುಪಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿಯಾಗಬಾರದು. ವಿದ್ಯಾರ್ಥಿಗಳ ದೂರುಗಳನ್ನು ನಿರ್ಲಕ್ಷ್ಯ ಮಾಡದೇ ಎಚ್ಚರ ವಹಿಸಬೇಕು’ ಎಂದರು. 

‘ಹೊರಗುತ್ತಿಗೆ ನೌಕರರಿಗೆ ನೇಮಕಾತಿ ಆದೇಶ ನೀಡುವ ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಬೇಕು. 50 ಮಕ್ಕಳಿಗೆ ಮೂವರು ನೌಕರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಹೆಚ್ಚುವರಿ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‍ಗಳಲ್ಲಿ ಸಂಖ್ಯೆಗೆ ಅನುಗುಣವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಬೇಕು. ಹೀಗೆ ನೇಮಿಸಿಕೊಳ್ಳುವಾಗ ಈ ಹಿಂದೆ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸಿ ಅನುಭವ ಇರುವವರಿಗೆ ಆದ್ಯತೆ ನೀಡಬೇಕು’ ಎಂದರು.

‘ಅಡುಗೆ ಸಹಾಯಕರನ್ನು ಸ್ವಚ್ಛತೆ ಕಾರ್ಯಕ್ಕೆ ನೇಮಿಸಬಾರದು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಸಹಾನುಭೂತಿಯಿಂದ ಕಾಣಬೇಕು. ಕಾನೂನಿನ ಚೌಕಟ್ಟಿನ ಒಳಗೆ ಅವರಿಗೆ ಸಹಾಯ ಮಾಡಬೇಕು. ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿಗೆ ಒತ್ತು ನೀಡಬೇಕು. ಕುಂದುಕೊರತೆ ಹಾಗೂ ಪುನಶ್ಚೇತನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು’ ಎಂದರು.

‘ಹೊರಗುತ್ತಿಗೆ ನೌಕರರು ನಿಯಮಾನುಸಾರ ಕೆಲಸ ನಿರ್ವಹಿಸಲು ಅಸಹಕಾರ ತೋರುವುದು, ಸಂಘಟನೆಗಳೊಂದಿಗೆ ಸೇರಿ ಇತರೆ ಚಟುವಟಿಕೆಗಳಲ್ಲಿ ತೊಡಗುವುದು ಮಾಡಿದರೆ ಮುಲಾಜು ತೊರದೆ ಅವರ ಸೇವೆಯನ್ನು ಕಡಿತಗೊಳಿಸಬೇಕು. ಇಲಾಖೆ ನೀಡಿರುವ ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡುವಂತೆ ಅವರ ಮೇಲೆ ನಿಗಾ ವಹಿಸಬೇಕು. ಇತರ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳದಂತೆ ತಡೆಯಬೇಕು’ ಎಂದರು.‌ 

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.