ADVERTISEMENT

ಚಿತ್ರದುರ್ಗ: ಗೋ ಸಾಗಣೆಗೆ ಇ–ಪರವಾನಗಿ ಕಡ್ಡಾಯ

ಪರವಾನಗಿ ನೀಡಲು ತಾಂತ್ರಿಕ ಸ್ಪರ್ಶ ನೀಡಿದ ಪಶುಸಂಗೋಪನಾ ಇಲಾಖೆ

​ಪ್ರಜಾವಾಣಿ ವಾರ್ತೆ
Published 25 ಮೇ 2023, 23:40 IST
Last Updated 25 ಮೇ 2023, 23:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಜಾನುವಾರು ಸಾಗಣೆಯ ಪರವಾನಗಿ ಪಡೆಯುವ ವ್ಯವಸ್ಥೆಗೆ ತಾಂತ್ರಿಕ ಸ್ಪರ್ಶ ನೀಡಿರುವ ಪಶುಸಂಗೋಪನಾ ಇಲಾಖೆಯು, ‘ಇ – ಪರವಾನಗಿ’ಯನ್ನು ಕಡ್ಡಾಯಗೊಳಿಸಿದೆ. ವಾಹನದಲ್ಲಿ ಸಾಗಣೆಯಾಗುವ ಜಾನುವಾರುಗಳ ಖಚಿತತೆಗೆ ಇದು ಸಹಕಾರಿಯಾಗುತ್ತಿದೆ.

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2021’ಕ್ಕೆ ಅನುಗುಣವಾಗಿ ನೂತನ ವ್ಯವಸ್ಥೆ ರೂಪುಗೊಂಡಿದೆ. ಜಾನುವಾರುಗಳ ಮಾಲೀಕರು, ಖರೀದಿದಾರರು, ಸಾಗಣೆದಾರರಿಗೆ ಎದುರಾಗುತ್ತಿದ್ದ ತೊಂದರೆಯನ್ನು ನೀಗಿಸಲು ಈ ವ್ಯವಸ್ಥೆ ನೆರವಾಗಿದೆ.

ADVERTISEMENT

ಹಸು, ಕರು, ಎತ್ತು, ಎಮ್ಮೆ ಹಾಗೂ ಕೋಣ ಸಾಗಣೆಗೆ ಪರವಾನಗಿಯನ್ನು ಕಡ್ಡಾಯಗೊಳಿಸಿ ಇಲಾಖೆಯು 2021ರ ಜನವರಿಯಲ್ಲಿ ನೀತಿ ರೂಪಿಸಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಬಳಿಕ ಇದು ಕಟ್ಟುನಿಟ್ಟಾಗಿ ಜಾರಿಗೊಂಡಿತ್ತು. ಕೃಷಿ ಹಾಗೂ ಪಶುಸಂಗೋಪನೆಯ ಉದ್ದೇಶಕ್ಕೂ ಜಾನುವಾರು ಸಾಗಣೆಗೆ ಪರವಾನಗಿ ಕಡ್ಡಾಯಗೊಳಿಸಲಾಗಿತ್ತು. ಪರವಾನಗಿ ಪಡೆಯಲು ಇಲಾಖೆ, ಪಶು ಆಸ್ಪತ್ರೆಗಳಿಗೆ ಅಲೆಯಬೇಕಾಗಿತ್ತು. ಹೊಸ ವ್ಯವಸ್ಥೆಯಿಂದ ಇದು ತಪ್ಪಲಿದೆ.

ಪರವಾನಗಿ ಅಗತ್ಯ ಇರುವವರು ಮನೆಯಿಂದಲೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಲಾಖೆಯು https://animaltrans.karahvs.in ಜಾಲತಾಣವನ್ನು ರೂಪಿಸಿದೆ.

ಪಶುಪಾಲನೆ, ಚಿಕಿತ್ಸೆ, ಕೃಷಿ, ಮಾರಾಟ, ಗೋಶಾಲೆ, ಜಾನುವಾರು ಜಾತ್ರೆ, ಕಸಾಯಿ ಖಾನೆ ಹೀಗೆ ಸಾಗಣೆಯ ಉದ್ದೇಶವನ್ನು ನಮೂದಿಸಬೇಕು. ಸಾಗಣೆಗೆ ಬಳಸುವ ವಾಹನದ ಸಂಖ್ಯೆ, ಚಾಲಕರ ಹೆಸರು, ಚಾಲನಾ ಪರವಾನಗಿ, ಫೋನ್‌ ನಂಬರ್‌, ಸಾಗಣೆ ಮಾಡುವ ಜಾನುವಾರು ಹಾಗೂ ಅದರ ಮಾಲೀಕರ ಚಿತ್ರವನ್ನು ಅರ್ಜಿಯೊಂದಿಗೆ ಕಳುಹಿಸಬೇಕು. ವಾಹನ ಕ್ರಮಿಸುವ ದೂರ, ಸ್ಥಳದ ಮಾಹಿತಿ ಒದಗಿಸಬೇಕು. ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಲೂ ಜಾಲತಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್‌ ಮೂಲಕ ಸಲ್ಲಿಸಿದ ಅರ್ಜಿಯು ಸಂಬಂಧಿಸಿದ ಪಶುವೈದ್ಯಾಧಿಕಾರಿಗೆ ರವಾನೆಯಾಗುತ್ತದೆ. ಅರ್ಜಿ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಿ ‘ಸಕಾಲ’ದ ವ್ಯಾಪ್ತಿಗೆ ತರಲಾಗಿದೆ. ಕ್ಯೂ ಆರ್‌ ಕೋಡ್‌ ಹೊಂದಿದ ಇ–ಪರವಾನಗಿಯನ್ನು ಸಾಗಣೆ ಸಂದರ್ಭದಲ್ಲಿ ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ತೋರಿಸಬಹುದು.

ಜಾನುವಾರುಗಳ ಕಳ್ಳಸಾಗಣೆ ತಡೆಯಲು ಈ ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ. ಅಲ್ಲದೆ, ಕೆಲವು ಕೋಮುಗಳ ನಡುವೆ ನಡೆಯುತ್ತಿದ್ದ ಕಲಹಕ್ಕೂ ಕಡಿವಾಣ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.