ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:39 IST
Last Updated 8 ಡಿಸೆಂಬರ್ 2018, 15:39 IST

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಸೌಭಾಗ್ಯ ಬಸವರಾಜನ್ ಅವರನ್ನು ಕೆಳಗಿಳಿಸುವ ಪ್ರಯತ್ನ ಒಂದು ವರ್ಷದಿಂದಲೂ ಆಗಿಂದಾಗ್ಗೆ ನಡೆಯುತ್ತಿದ್ದು, ಈಗ ಹೊಸ ತಿರುವು ಪಡೆದುಕೊಂಡಿದೆ.

ಹೇಗಾದರೂ ಮಾಡಿ ಕೆಳಗಿಳಿಸಲೇಬೇಕು ಎಂದು ಅವರ ವಿರುದ್ಧ ಅನೇಕ ಸದಸ್ಯರು ಅವಿಶ್ವಾಸ ಗೊತ್ತುವಳಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಎರಡು ದಿನಗಳಿಂದ ಈ ವಿಷಯ ಚರ್ಚೆಯಲ್ಲಿದ್ದು, ಸದಸ್ಯರು ಕೆಲವೆಡೆ ಗೌಪ್ಯ ಸಭೆ ನಡೆಸುತ್ತಿದ್ದಾರೆ.

ಸೌಭಾಗ್ಯ ಬಸವರಾಜನ್ ಎರಡೂವರೆ ವರ್ಷದಿಂದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಒಬ್ಬರೇ ಅಧಿಕಾರ ಅನುಭವಿಸಿದರೆ ಉಳಿದವರು ಏನು ಮಾಡಬೇಕು. ಕೊಟ್ಟ ಮಾತಿನಂತೆ ಅವರು ಅಧಿಕಾರ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅವರನ್ನು ಕೆಳಗಿಳಿಸಲೇಬೇಕು ಎಂದು ಮಾಜಿ ಸಚಿವ ಆಂಜನೇಯ, ಸಂಸದ ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಶಾಸಕ ಗೋವಿಂದಪ್ಪ, ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್ ಅವರ ಬಳಿ ಈಗಲೂ ಸದಸ್ಯರು ಒತ್ತಾಯಿಸುತ್ತಲೇ ಬಂದಿದ್ದಾರೆ.

ADVERTISEMENT

ಕಾಂಗ್ರೆಸ್‌ನ 22 ಸದಸ್ಯರ ಪೈಕಿ 19 ಮಂದಿ ಈಗಾಗಲೇ ಸಹಿ ಹಾಕಿದ್ದು, ಉಳಿದ ಮೂವರಿಂದ ಸಹಿ ಪಡೆದು ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಸಂಬಂಧಪಟ್ಟ ಅಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಇದು ಕೇವಲ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ ಉಪಾಧ್ಯಕ್ಷ ಸ್ಥಾನಕ್ಕೂ ಅವಿಶ್ವಾಸ ಗೊತ್ತುವಳಿ ಮಂಡಿಸಲು ತೀರ್ಮಾನಿಸಿ ಸಹಿ ಹಾಕಿದ್ದೇವೆ ಎಂದು ಜಿಲ್ಲಾ ಪಂಚಾಯಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಕೆಳಗಿಸುವ ಪ್ರಯತ್ನ ನಡೆದ ಒಂದು ವರ್ಷದಿಂದಲೂ ಸೌಭಾಗ್ಯ ಕಾಂಗ್ರೆಸ್‌ ನಾಯಕರ ಮಾತಿಗೂ ಮಣಿಯದೇ ಅಧಿಕಾರ ನಡೆಸುತ್ತಿದ್ದಾರೆ. ಈಗ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುರಿತು ದೂರವಾಣಿ ಮೂಲಕ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.