ADVERTISEMENT

ಹಿರಿಯೂರು | ಸಾರ್ವಜನಿಕರ ನೆಮ್ಮದಿ ಕೆಡಿಸಿರುವ ಅಂಡರ್‌ ಪಾಸ್‌ಗಳು!

ಸರಣಿ ಅಪಘಾತಗಳಿಗೆ ಲೆಕ್ಕವೇ ಇಲ್ಲ.. ಹೈರಾಣಾಗಿರುವ ವಾಹನ ಸವಾರರು...

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:39 IST
Last Updated 18 ಅಕ್ಟೋಬರ್ 2025, 7:39 IST
ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ನಿರ್ಮಿಸಿರುವ ಅಂಡರ್ ಪಾಸ್‌ನಲ್ಲಿ ಇತ್ತೀಚೆಗೆ ಸುರಿದ ಮಳೆ ನೀರಿನಲ್ಲಿ ಕಾರೊಂದು ಮುಳುಗುತ್ತಿರುವುದು
ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ನಿರ್ಮಿಸಿರುವ ಅಂಡರ್ ಪಾಸ್‌ನಲ್ಲಿ ಇತ್ತೀಚೆಗೆ ಸುರಿದ ಮಳೆ ನೀರಿನಲ್ಲಿ ಕಾರೊಂದು ಮುಳುಗುತ್ತಿರುವುದು   

ಹಿರಿಯೂರು: ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಹೆದ್ದಾರಿ ಪ್ರಾಧಿಕಾರದವರು ನಿರ್ಮಿಸಿರುವ ಅಂಡರ್‌ಪಾಸ್‌ಗಳು ಸಾರ್ವಜನಿಕರ ನೆಮ್ಮದಿ ಕೆಡಿಸಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಸರಣಿ ಅಪಘಾತಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.

ಎಲ್ಲೆಲ್ಲಿ ಅಂಡರ್ ಪಾಸ್‌ಗಳನ್ನು ದೊಡ್ಡದಾಗಿ ನಿರ್ಮಿಸಬೇಕಿತ್ತೋ ಅಲ್ಲಿ ಕಿರಿದಾಗಿಸಿ, ಅಗತ್ಯ ಇಲ್ಲದ ಕಡೆ ದೊಡ್ಡದಾಗಿ ನಿರ್ಮಿಸಿದ್ದಾರೆ. ವಾಣಿ ವಿಲಾಸಪುರ ಕ್ರಾಸ್‌ನಲ್ಲಿ ಆರು ವಾಹನಗಳು ಒಮ್ಮೆಗೆ ಸಾಗುವಷ್ಟು ದೊಡ್ಡದಾದ ಅಂಡರ್ ಪಾಸ್ ನಿರ್ಮಿಸಿದ್ದಾರೆ. ಪ್ರವಾಸಿ ಮಂದಿರ ವೃತ್ತದಲ್ಲಿ ದೊಡ್ಡ ಅಂಡರ್ ಪಾಸ್ ಅಗತ್ಯವಿದ್ದು, ಅಲ್ಲಿ ಕಿರಿದು ಮಾಡಿರುವ ಕಾರಣ ಅಪಘಾತಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ ಎಂಬುದು ಸಾರ್ವಜನಿಕರು ದೂರು.

ಮಳೆ ಬಂದರೆ ಕೆರೆ: 

ADVERTISEMENT

ಹೆದ್ದಾರಿಯಲ್ಲಿ ನಿರ್ಮಿಸಿರುವ ಬಹುತೇಕ ಅಂಡರ್‌ ಪಾಸ್‌ಗಳು ಸಣ್ಣ ಪ್ರಮಾಣದ ಮಳೆ ಬಂದರೂ ಕೆರೆಗಳಂತಾಗುತ್ತವೆ. ಇದಕ್ಕೆ ಗುಯಿಲಾಳು, ಮೇಟಿಕುರ್ಕೆ, ಎಪಿಎಂಸಿ ಮುಂಭಾಗ, ಪಟ್ರೆಹಳ್ಳಿ, ಆದಿವಾಲ, ಜವನಗೊಂಡನ ಹಳ್ಳಿಯಲ್ಲಿರುವ ಅಂಡರ್ ಪಾಸ್‌ಗಳೇ ನಿದರ್ಶನ. ತಿಂಗಳ ಹಿಂದೆ ಪಟ್ರೆಹಳ್ಳಿ ಅಂಡರ್ ಪಾಸ್‌ನ ಮಳೆಯ ನೀರಿನಲ್ಲಿ ಕಾರೊಂದು ಸಿಲುಕಿ ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದರು. ಅಂಡರ್ ಪಾಸ್ ಸರಿಪಡಿಸುವಂತೆ ಪಟ್ರೆಹಳ್ಳಿ ಗ್ರಾಮಸ್ಥರು ಹೆದ್ದಾರಿ ನಿರ್ಮಾಣ ಆದಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಗ್ರಾಮದ ನೂರಾರು ಮಹಿಳೆಯರು ಗುಯಿಲಾಳು ಟೋಲ್ ಮುಂದೆ ಪ್ರತಿಭಟನೆ ನಡೆಸಿ, ಅಂಡರ್ ಪಾಸ್ ಸರಿಪಡಿಸುವಂತೆ ಒತ್ತಾಯಿಸಿದ್ದರು.

ಹೊಸ ಅಂಡರ್ ಪಾಸ್; ಆಕ್ರೋಶ:

ಸಾರ್ವಜನಿಕರ ಒತ್ತಾಯದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ್ತೂರಿ ರಂಗಪ್ಪನಹಳ್ಳಿ ಸಮೀಪ ಎರಡು ಕಡೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಮೂರು ವರ್ಷವಾಗುತ್ತ ಬಂದಿದ್ದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ವಾರಾಂತ್ಯದ ದಿನಗಳಲ್ಲಿ ಈ ಸ್ಥಳಗಳಲ್ಲಿ ವಾಹನ ಸಂಚಾರವು ಗಂಟೆಗಟ್ಟಲೆ ಅಸ್ತವ್ಯಸ್ತವಾಗುತ್ತದೆ. ರಸ್ತೆ ಅಗೆಯವ ಮೂಲಕ ಮಣ್ಣನ್ನು ತೆಗೆದು ರಾಶಿ ಹಾಕಿದ್ದು, ಮೂರ್ನಾಲ್ಕು ಅಡಿ ಎತ್ತರಕ್ಕೆ ಗಿಡಗಳು ಬೆಳೆದಿರುವುದು ಕಾಮಗಾರಿಯನ್ನು ಅಣಕಿಸುತ್ತಿದೆ.

ಹೆದ್ದಾರಿಗೆ ಕಾಯಕಲ್ಪ ಅಗತ್ಯ: 

ಬೆಂಗಳೂರು ಕಡೆಯಿಂದ ಧರ್ಮಪುರ ಮಾರ್ಗವಾಗಿ ಪಾವಗಡ, ಅನಂತಪುರ, ಹಿಂದೂಪುರ ಕಡೆ ಹೋಗುವವರು ಹಿರಿಯೂರು ನಗರದಲ್ಲಿ ಹೆದ್ದಾರಿ ದಾಟಲು ಐದಾರು ಕಿ.ಮೀ. ಸುತ್ತು ಹಾಕಬೇಕು. ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಅಂಡರ್ ಪಾಸ್ ನಿರ್ಮಿಸಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಐಮಂಗಲ ಗ್ರಾಮದಲ್ಲಿ ಊರಿನ ಮಧ್ಯದಲ್ಲಿ ಚಿಕ್ಕ ಅಂಡರ್ ಪಾಸ್ ನಿರ್ಮಿಸಿ ಒಂದೂವರೆ ಫರ್ಲಾಂಗ್ ದೂರದಲ್ಲಿ ಬೃಹತ್ ಅಂಡರ್ ಪಾಸ್ ನಿರ್ಮಿಸಿದ್ದಾರೆ.

ಆದಿವಾಲ ಮತ್ತು ಪಟ್ರೆಹಳ್ಳಿಗಳಲ್ಲಿ ಹೆದ್ದಾರಿಯ ಮತ್ತೊಂದು ಬದಿಗೆ ಇರುವ ಊರಿನವರನ್ನು ಭೇಟಿ ಮಾಡಲು 1 ಕಿ.ಮೀ. ಸುತ್ತು ಹಾಕಿ ಹೋಗಬೇಕು. ಹೆದ್ದಾರಿ ಪ್ರಾಧಿಕಾರದವರು ಇಂತಹ ಅವೈಜ್ಞಾನಿಕ ಅಂಡರ್ ಪಾಸ್‌ಗಳ ಪಟ್ಟಿ ಮಾಡಿ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸದಾಗಿ ಅಂಡರ್ ಪಾಸ್‌ಗಳನ್ನು ನಿರ್ಮಿಸುವ ಮೂಲಕ ನಿತ್ಯ ಯಾತನೆ ಅನುಭವಿಸುತ್ತಿರುವ ಗ್ರಾಮೀಣ ಭಾಗದ ಜನರ ನೆರವಿಗೆ ಬರಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಬೆಂಗಳೂರು ತಲುಪಲು ಐದೂವರೆ ಗಂಟೆ
 165 ಕಿ.ಮೀ. ಅಂತರದಲ್ಲಿರುವ ಬೆಂಗಳೂರು ತಲುಪಲು ಹಿರಿಯೂರಿನಿಂದ ಕಾರಿನಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆ ಸಾಕು. ತಡೆರಹಿತ ಬಸ್‌ಗಳೇ 3 ಗಂಟೆ ಒಳಗೆ ಮೆಜೆಸ್ಟಿಕ್‌ಗೆ ಹೋಗುತ್ತವೆ. ಆದರೆ ಅಂಡರ್ ಪಾಸ್‌ಗಳ ಅವ್ಯವಸ್ಥೆಯ ಕಾರಣಕ್ಕೆ ಬೆಂಗಳೂರಿಗೆ ಹೋಗಿಬರುವ ವಿಚಾರದಲ್ಲಿ ಇಷ್ಟೇ ಸಮಯ ಎಂದು ಹೇಳಲಾಗದು. ಕೆಲವೊಮ್ಮೆ ಐದೂವರೆ ಗಂಟೆ ಬೇಕು. ಕೆ.ಆರ್. ಹಳ್ಳಿ ತುಮಕೂರು ಪ್ರವೇಶ ದ್ವಾರದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಅರ್ಧಕ್ಕೇ ನಿಲ್ಲಿಸಿರುವ ಕಾರಣ ಪ್ರಯಾಣಿಕರು ಯಾತನೆ ಅನುಭವಿಸಬೇಕಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಇಲ್ಲಿನ ಸಮಸ್ಯೆ ಬಗ್ಗೆ ದೆಹಲಿಯಲ್ಲಿ ಗಟ್ಟಿ ದನಿ ಎತ್ತಬೇಕು. ಸಿ.ಬಿ. ಪಾಪಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜವನಗೊಂಡನಹಳ್ಳಿ