ADVERTISEMENT

ವಿವಿ ಸಾಗರ ಜಲಾಶಯ | 2ನೇ ಬಾರಿ ಕೋಡಿ: ಜನರಲ್ಲಿ ಹೆಚ್ಚಾದ ಸಂಕ್ರಾಂತಿ ಸಂಭ್ರಮ

ಸುವರ್ಣಾ ಬಸವರಾಜ್
Published 14 ಜನವರಿ 2025, 4:59 IST
Last Updated 14 ಜನವರಿ 2025, 4:59 IST
ವಾಣಿವಿಲಾಸ ಜಲಾಶಯದ ಕೋಡಿಯಲ್ಲಿ ಸಣ್ಣಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸ್ಥಳೀಯರು ಗಂಗಾಪೂಜೆ ನೆರವೇರಿಸಿರುವುದು 
ವಾಣಿವಿಲಾಸ ಜಲಾಶಯದ ಕೋಡಿಯಲ್ಲಿ ಸಣ್ಣಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸ್ಥಳೀಯರು ಗಂಗಾಪೂಜೆ ನೆರವೇರಿಸಿರುವುದು    

ಹಿರಿಯೂರು: ಬರೋಬ್ಬರಿ 89 ವರ್ಷಗಳ ಕಾಲ ತುಂಬದಿದ್ದ ವಿವಿ ಸಾಗರ ಜಲಾಶಯ ಇದೀಗ ಕೇವಲ ಎರಡೂವರೆ ವರ್ಷದ ಅಂತರದಲ್ಲಿ ಎರಡನೇ ಬಾರಿ ಜಲಾಶಯ ಕೋಡಿ ಬಿದ್ದಿದ್ದು, ಸಾರ್ವಜನಿಕರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ.

1933ರಲ್ಲಿ ಪ್ರಥಮ ಬಾರಿಗೆ ಜಲಾಶಯ ಕೋಡಿ ಬಿದ್ದಿತ್ತು. 89 ವರ್ಷಗಳ ನಂತರ 2022 ಸೆ. 2ರಂದು 2ನೇ ಬಾರಿಗೆ ಕೋಡಿ ಬಿದ್ದಿತ್ತು. ಈಗ 3ನೇ ಬಾರಿಗೆ ಜ. 12ರಂದು ಕೋಡಿಯಲ್ಲಿ ನೀರು ಹರಿದಿದೆ. ಇದು ಸಂಕ್ರಾಂತಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. 1933 ಹಾಗೂ 2022ರಲ್ಲಿ ಜಲಾಶಯ ತನ್ನ ಗರಿಷ್ಠ ಮಟ್ಟ 135 ಅಡಿ ತಲುಪಿದ್ದರಿಂದ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ವೇದಾವತಿ ನದಿ ಸೇರಿತ್ತು. ಕೋಡಿಯಲ್ಲಿ ನೀರು ನರ್ತಿಸುತ್ತ ಸಾಗುವ ದೃಶ್ಯ ಮನಮೋಹಕವಾಗಿತ್ತು.

ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರಯತ್ನದಿಂದ ಭದ್ರಾ ಜಲಾಶಯದಿಂದ ನೀರನ್ನು ಪಂಪ್ ಮಾಡಿ ಜಲಾಶಯವನ್ನು ತುಂಬಿಸಲಾಗಿದೆ. ಕೋಡಿಯಲ್ಲಿ ಹೆಚ್ಚೆಂದರೆ 690 ಕ್ಯುಸೆಕ್ ನೀರು ಹೊರಹೋಗಲಿದೆ. ಹೀಗಾಗಿ 2022ರಲ್ಲಿನ ನೀರು ಹರಿವಿನ ಸಂಭ್ರಮ ಈ ಬಾರಿ ಇರದು.

ADVERTISEMENT

2017ರಲ್ಲಿ ಮಳೆಗಾಗಿ ಪರ್ಜನ್ಯ ಪೂಜೆ ಮಾಡಿಸಿದರೂ ವರುಣನ ಕೃಪೆಯಾಗದೆ ವಾಣಿವಿಲಾಸ ಜಲಾಶಯ ಪ್ರಥಮ ಬಾರಿಗೆ ಡೆಡ್ ಸ್ಟೋರೇಜ್ (60 ಅಡಿ) ತಲುಪಿತ್ತು. ಜಿಲ್ಲೆಯ ಅಂತರ್ಜಲಕ್ಕೆ ಏಕಮಾತ್ರ ಆಸರೆ ಎಂದೇ ಗುರುತಿಸಲ್ಪಟ್ಟಿದ್ದ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದರಿಂದ ಒಂದೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾದರೆ, ಮತ್ತೊಂದೆಡೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ತೆಂಗು, ಅಡಿಕೆ ತೋಟಗಳು ಕಣ್ಮರೆಯಾಗಿ, ನೂರಾರು ಕುಟುಂಬಗಳು ಊರು ತೊರೆದು ಬದುಕು ಅರಸಿ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಿದ್ದವು.

ಸ್ಥಳೀಯ ರೈತರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ 2019ರಿಂದ ಭದ್ರಾ ಜಲಾಶಯದ ನೀರನ್ನು ತಾತ್ಕಾಲಿಕವಾಗಿ ಪಂಪ್ ಮಾಡುವ ಮೂಲಕ ವಾಣಿವಿಲಾಸಕ್ಕೆ ಹರಿಸಲು ಆರಂಭಿಸಿತು. ಭದ್ರಾ ನೀರಿನ ಜೊತೆಗೆ ವರುಣನ ಕೃಪೆಯೂ ಸೇರಿ ಜಲಾಶಯದ ನೀರಿನ ಮಟ್ಟ 60 ಅಡಿಯಿಂದ 102.15 ಅಡಿಗೆ ಹೆಚ್ಚಿತ್ತು. 2020ರಲ್ಲಿ ನೀರಿನಮಟ್ಟ 106 ಅಡಿಗೆ, 2021ರಲ್ಲಿ 125.15 ಅಡಿಗೆ ತಲುಪಿತ್ತು. 2022ರಲ್ಲಿ ಸುರಿದ ಭಾರಿ ಮಳೆ ಹಾಗೂ ಭದ್ರಾ ಜಲಾಶಯದ ನೀರು ಸೇರಿದ್ದರಿಂದ 89 ವರ್ಷದ ನಂತರ ವಾಣಿವಿಲಾಸ ಜಲಾಶಯ ಎರಡನೇ ಬಾರಿಗೆ ಕೋಡಿ ಬಿದ್ದಿತ್ತು.

ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 850 ದಶಲಕ್ಷ ಘನಮೀಟರ್ (30.00 ಟಿಎಂಸಿ ಅಡಿ). ಸಮುದ್ರಮಟ್ಟದಿಂದ 2050 ಅಡಿ ಎತ್ತರದಲ್ಲಿರುವ, 2075 ಚದರ ಮೈಲಿ ಕ್ಯಾಚ್‌ಮೆಂಟ್ ಪ್ರದೇಶ ಹೊಂದಿರುವ ಜಲಾಶಯದ ಪೂರ್ಣಮಟ್ಟ 130 ಅಡಿ. ಜಲಾಶಯದ ನೀರನ್ನು ಒಂದು ಗೇಟ್‌ನಿಂದ ಮೇಲ್ಮಟ್ಟದ ಕಾಲುವೆಗೆ ಮತ್ತೊಂದು ಗೇಟ್‌ನಿಂದ ಎಡ ಮತ್ತು ಬಲನಾಲೆಗಳಿಗೆ ಬಿಡಲಾಗುತ್ತದೆ.

ಜಲಾಶಯ ನಿರ್ಮಾಣದಿಂದ 32 ಹಳ್ಳಿಗಳು ಜಮೀನು ಸಹಿತ ಪೂರ್ಣ ಮುಳುಗಡೆಯಾಗಿದ್ದರೆ, 18 ಹಳ್ಳಿಗಳ ಭೂಮಿ ಭಾಗಶಃ ಮುಳುಗಡೆಯಾಗಿತ್ತು. ಜಲಾಶಯ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲು 1901ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾರಿಕಣಿವೆಗೆ ಭೇಟಿ ನೀಡಿದ್ದರು. ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ಎಂಜಿನಿಯಎ್‌ಗಳಾದ ಎಚ್.ಡಿ. ರೈಸ್, ಮೆಕನೀಲ್ ಕ್ಯಾಂಪ್ ಬೆಲ್, ಚುನ್ನಿಲಾಲ್ ತಾರಾಚಂದ್ ದಲಾಲ್ ಅವರ ಕೊಡುಗೆ ಅವಿಸ್ಮರಣೀಯ.

ಗರಿಷ್ಠ ಮಟ್ಟ ತಲುಪಿರುವ ವಾಣಿವಿಲಾಸ ಜಲಾಶಯದ ವಿಹಂಗಮ ನೋಟ

ನೀರು ಮರು ಹಂಚಿಕೆಗೆ ಒತ್ತಾಯ

‘ವಾಣಿವಿಲಾಸ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ಕನಿಷ್ಠ 10 ಟಿಎಂಸಿ ಅಡಿ ನೀರನ್ನು ಮರುಹಂಚಿಕೆ ಮಾಡಬೇಕು. ನಾಲೆಗಳನ್ನು ಆಧುನೀಕರಣಗೊಳಿಸಬೇಕು. ವಾಣಿವಿಲಾಸ ಜಲಾಶಯದ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ಈ ಕುರಿತು ಜ. 18ರಂದು ಬಾಗಿನ ಸಮರ್ಪಣೆಗೆ ಬರುವ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಮುಖಂಡರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.