ADVERTISEMENT

ಚಿತ್ರದುರ್ಗ: ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:52 IST
Last Updated 21 ಆಗಸ್ಟ್ 2025, 6:52 IST
ವರ್ಷಿತಾ ಕೊಲೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿದರು
ವರ್ಷಿತಾ ಕೊಲೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಪದವಿ ವಿದ್ಯಾರ್ಥಿನಿ ವರ್ಷಿತಾ ಹತ್ಯೆ ಖಂಡಿಸಿ ಬುಧವಾರ ನಗರದಲ್ಲಿ ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿದವು. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ವರ್ಷಿತಾಳ ಪೋಷಕರು ಹಾಗೂ ಕೋವೇರಹಟ್ಟಿ ಗ್ರಾಮಸ್ಥರು ಎರಡು ಗಂಟೆಗೂ ಹೆಚ್ಚು ರಸ್ತೆ ತಡೆ ನಡೆಸಿದರು. ದಲಿತ ಸಂಘಟನೆಗಳು ಜಿಲ್ಲಾ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಕರುನಾಡ ವಿಜಯಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ, ಅಂಬೇಡ್ಕರ್ ಸೇವಾ ಸಮಿತಿ ಕಾರ್ಯಕರ್ತರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳು ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಒನಕೆ ಓಬವ್ವ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ರೋಟರಿ ಶಾಲೆಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚನೆಯುಂಟಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ADVERTISEMENT

ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಹತ್ಯೆಗೀಡಾದ ವಿದ್ಯಾರ್ಥಿನಿ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಘೋಷಿಸಿ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.

ಪದವಿ ವಿದ್ಯಾರ್ಥಿನಿಯನ್ನು ದಾರುಣವಾಗಿ ಮಾನವ ಕುಲವೇ ಬೆಚ್ಚಿ ಬೀಳುವ ರೀತಿಯಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಲಾಗಿದೆ. ಈ ಘಟನೆ ದೇಶವೇ ತಲೆತಗ್ಗಿಸುವಂತತೆ ಮಾಡಿದೆ. ಅಪರಾಧಿಗಳಿಗೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಸೇರಿದಂತೆ ನರಹತ್ಯೆ ಹಾಗೂ ಕಾನೂನು ಸುವ್ಯವಸ್ಥೆ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷ ಏಳು ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 43,053 ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ ಸೇರಿದಂತೆ ಅತ್ಯಾಚಾರ ಪ್ರಕರಣಗಳು ಕೂಡ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತಾಗಿ ಸರ್ಕಾರ ಹಾಗೂ ನಾಗರೀಕ ಸಮಾಜದ ಕರ್ತವ್ಯ ಪ್ರಜ್ಞೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಚಳ್ಳಕೆರೆ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಉ ಪ್ರತಿಭಟನೆ ನಡೆಸುತ್ತದ್ದ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು ಸ್ಥಳಕ್ಕೆ ಬಂದರು

ಕ್ಯಾಂಪಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಬೇರೆ ಬೇರೆ ಕಾರಣಕ್ಕೆ ಸರಣಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಘಟನೆಯನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕಾನೂನಿನ ಅನ್ವಯ ಸೂಕ್ತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ವಿದ್ಯಾರ್ಥಿನಿಯರ ಹಿತ ಕಾಯಲು ಸಮರ್ಪಕ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್‌ ಬೀರಾವರ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಮಚಂದ್ರ, ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್‌, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್‌.ಕೆ.ಪ್ರವೀಣ್‌ ಸೇರಿದಂತೆ ಸಂಘಟನೆಗಳು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಪ್ರತಿಭಟನಾ ಸ್ಥಳಕ್ಕೆ ಬಂದರು

ಯಾರನ್ನೂ ರಕ್ಷಿಸಲ್ಲ; ಸಚಿವ

‘ನನ್ನ 25 ವರ್ಷದ ಅನುಭವದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ ಕೊಲೆಯಾಗಿದೆ. ಕೊಲೆ ಹಿಂದೆ ಯಾರೇ ಇದ್ದರೂ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳು ಎಷ್ಟು ಜನ ಇದ್ದರೂ ಅವರನ್ನು ಬಂಧಿಸಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. ‘ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದನ್ನು ಪೊಲೀಸರು ಶೀಘ್ರವೇ ಪತ್ತೆಹಚ್ಚಲಿದ್ದಾರೆ. ವಿದ್ಯಾರ್ಥಿನಿಯನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರಿಗೆ ₹ 5 ಲಕ್ಷ ಪರಿಹಾರ ವಿತರಣೆ ಮಾಡಲಾಗುವುದು’ ಎಂದರು.

ಹಾಸ್ಟೆಲ್‌ಗಳಲ್ಲಿ ಭದ್ರತೆ ಕೊರತೆ

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಲ್ಪಸಂಖ್ಯಾತರ ವಸತಿ ಗೃಹಗಳಲ್ಲಿ ಭದ್ರತೆ ಇಲ್ಲವಾಗಿದೆ. ಕೊಲೆಯಾದ ವಿದ್ಯಾರ್ಥಿನಿಯು ಬಂಧಿತ ಆರೋಪಿ ಜೊತೆ ರಾತ್ರಿ 11 ಗಂಟೆವರೆಗೂ ಮಾತನಾಡುತ್ತಿದ್ದಳು ಎಂದು ಆಕೆಯ ಸ್ನೇಹಿತೆಯರು ತಿಳಿಸಿದ್ದಾರೆ. ಹಾಸ್ಟೆಲ್‌ಗಳಲ್ಲಿ ಭದ್ರತೆ ಇಲ್ಲವೇ? ಹಾಸ್ಟೆಲ್‌ಗಳಲ್ಲಿ ರಾತ್ರಿ ವೇಳೆ ವಾರ್ಡನ್‌ ಕಾವಲುಗಾರರು ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಾಸ್ಟೆಲ್‌ ವಿದ್ಯಾರ್ಥಿಗಳು ರಾತ್ರಿಯ ವೇಳೆ ಬಾರ್‌ ಡಾಭಾಗಳಿಗೆ ತೆರಳುತ್ತಾರೆ ಎಂಬ ಆರೋಪವಿದೆ. ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ವರ್ಷಿತಾ ಇದ್ದ ಹಾಸ್ಟೆಲ್‌ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಬೇಕು. ಅವರು ತಪ್ಪೆಸಗಿದ್ದರೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಕುಸಿದ ಕಾನೂನು ಸುವ್ಯವಸ್ಥೆ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕಳ್ಳರು ಅತ್ಯಾಚಾರಿಗಳ ಹಾವಳಿ ವಿಪರೀತವಾಗಿದ್ದು ಮಹಿಳೆಯರು ಓಡಾಡುವುದು ಕಷ್ಟವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಬಳಿ ಬೆಳಕು ಇಲ್ಲದ ಕಾರಣ ಕಿಡಿಗೇಡಿಗಳು ತಮ್ಮ ಕೃತ್ಯಗಳಿಗೆ ಹೆದ್ದಾರಿ ಸಮೀಪದ ಜಾಗಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳ ಹಾವಳಿಯನ್ನು ನಿಯಂತ್ರಿಸಲು ಪೊಲೀಸರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವರ್ಷಿತಾ ಕೊಲೆ ಪ್ರಕರಣದಿಂದ ಗ್ರಾಮೀಣ ಭಾಗದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹೆದರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.