ADVERTISEMENT

ಹೊಸದುರ್ಗ | ಬಂಗಾರವಾಯಿತು ಜೀವ ಜಲ: ಹಬ್ಬಕ್ಕೆ ಕುತ್ತು

ಬರಿದಾದ ಕೊಳವೆಬಾವಿಗಳು l ಕೆಲವೆಡೆ ಟ್ಯಾಂಕರ್‌ ನೀರು ಪೂರೈಕೆ

ಶ್ವೇತಾ ಜಿ.
Published 6 ಏಪ್ರಿಲ್ 2024, 7:15 IST
Last Updated 6 ಏಪ್ರಿಲ್ 2024, 7:15 IST
ಹೊಸದುರ್ಗದ ಲಕ್ಕಿಹಳ್ಳಿಯಲ್ಲಿ ಡ್ರಂಗಳನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ನೀರು ಸಾಗಿಸುತ್ತಿರುವುದು
ಹೊಸದುರ್ಗದ ಲಕ್ಕಿಹಳ್ಳಿಯಲ್ಲಿ ಡ್ರಂಗಳನ್ನು ಟ್ರ್ಯಾಕ್ಟರ್‌ನಲ್ಲಿಟ್ಟು ನೀರು ಸಾಗಿಸುತ್ತಿರುವುದು   

ಹೊಸದುರ್ಗ: ‘ಭೀಕರ ಬರಗಾಲ ಆವರಿಸಿದೆ. ನಿತ್ಯ ಬೆಳಗಾದರೆ ನೀರಿಗೆ ಪರದಾಟ. ನೀರು ಬಂಗಾರದಂತಾಗಿದ್ದು, ಮಿತವಾಗಿ ಬಳಸಬೇಕಾಗಿದೆ’...

ತಾಲ್ಲೂಕಿನ ಅಡವಿಸಂಗೇನಹಳ್ಳಿ ಗ್ರಾಮದ ನಿವಾಸಿ ಕರಿಯಮ್ಮ ನೀರಿನ ಬವಣೆಯ ಕುರಿತು ಹೇಳಿದ್ದು ಹೀಗೆ.

‘ಬರಗಾಲದಿಂದ ಯಾವುದೇ ಆದಾಯ ಕೈಸೇರಿಲ್ಲ, ಹೀಗೇ ಆದರೆ ನಾವು ಯುಗಾದಿ ಹಬ್ಬ ಆಚರಿಸಲು ತೊಂದರೆಯಾಗಲಿದೆ. ಮನೆ ಸ್ವಚ್ಛತೆ, ಅಭ್ಯಂಜನ ಸ್ನಾನ ಹೀಗೆ ಹಲವು ಕಾರ್ಯಗಳಿಗೆ ನೀರು ಬೇಕು. ಅದಕ್ಕೆ ನೀರು ಹೊಂದಿಸುವುದು ಹೇಗೆ ಎಂದು ಯೋಚನೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ADVERTISEMENT

ಪ್ರಸಕ್ತ ವರ್ಷ ತಾಲ್ಲೂಕಿನಾದ್ಯಂತ ಸಂಪೂರ್ಣ ಬರಗಾಲ ಆವರಿಸಿದ್ದು, ಜಮೀನುಗಳೆಲ್ಲಿ ಬೆಳೆ ಇಲ್ಲ, ಕೊಳವೆಬಾವಿಗಳಲ್ಲಿ ನೀರಿಲ್ಲ ಎಂಬ ಸ್ಥಿತಿ ಇದೆ. ಹೊಸದಾಗಿ ಎಷ್ಟೇ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ಕೊಳವೆಬಾವಿಗಳೂ ಬತ್ತುತ್ತಿವೆ. ಈಗಾಗಲೇ ಹಲವು ಕಡೆ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇನ್ನೂ ಹಲವೆಡೆ ನೀರಿಗಾಗಿ ಸಮಯ ನಿಗದಿ ಮಾಡಲಾಗಿದೆ.

‘ತಾಲ್ಲೂಕಿನ ಹೊನ್ನೆಕೆರೆ, ಹಳೇ ತಿಮ್ಮಪ್ಪನಹಟ್ಟಿ, ಮಾದಿಹಳ್ಳಿ, ಕಡವಿಗೆರೆ, ರಂಗೈನೂರು ಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಕೊಡಲಾಗುತ್ತಿದೆ. ಅಡವಿಸಂಗೇನಹಳ್ಳಿ, ರಂಗವ್ವನಹಳ್ಳಿ ಭೋವಿಹಟ್ಟಿ, ಹೆಬ್ಬಳ್ಳಿ ಸೇರಿ ಹಲವು ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ. ಕೊಳವೆಬಾವಿಗಳಲ್ಲಿ ಈಗಾಗಲೇ ರೀ ಬೋರ್‌ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ನಿವಾರಿಸಲು ಟ್ಯಾಂಕರ್‌ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಸುನೀಲ್‌ಕುಮಾರ್‌ ಮಾಹಿತಿ ನೀಡಿದರು.

‘ಪಟ್ಟಣಕ್ಕೆ ನಿತ್ಯ ನೀರುಣಿಸುವ ವೇದಾವತಿ ನದಿಯ ಕೆಲ್ಲೋಡು ಬ್ಯಾರೇಜ್‌ ಡೆಡ್‌ ಸ್ಟೋರೇಜ್‌ ತಲುಪಿದೆ. ನದಿ ತೀರದಲ್ಲಿ  ಕೊಳವೆಬಾವಿ ಕೊರೆಯಿಸಿ (ನದಿ ತೀರದ ಮರಳಿನ ಮಧ್ಯೆ 25ರಿಂದ 30 ಅಡಿ ಕೊಳವೆಬಾವಿ ಕೊರೆಯಿಸಿ ನೀರು ಪಡೆಯುವುದು) ನೀರು ನೀಡಲಾಗುತ್ತಿದೆ. ಯುಗಾದಿ ಹಾಗೂ ರಂಜಾನ್‌ ಮುಗಿಯುವವರೆಗೆ ಎಲ್ಲಿಯೂ ನೀರಿನ ಸಮಸ್ಯೆ ಕಾಡುವುದಿಲ್ಲ. ಟ್ಯಾಂಕರ್‌ ವ್ಯವಸ್ಥೆಗಾಗಿ ಟೆಂಡರ್‌ ಕರೆಯಲಾಗಿದೆ. ಪಟ್ಟಣದಲ್ಲಿ 90 ಕೊಳವೆಬಾವಿ ಇವೆ. ಮಿನಿ ಟ್ಯಾಂಕರ್‌ಗಳ ವ್ಯವಸ್ಥೆ ಇದೆ. ನೀರಿನ ಸಮಸ್ಯೆ ನಿವಾರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಆರ್.‌ ತಿಮ್ಮರಾಜು ತಿಳಿಸಿದರು.

ಕೆರೆ ನೀರಿಗೆ ಮೊರೆ: ತಾಲ್ಲೂಕಿನ ಬಾಗೂರು ಸೇರಿ ಹಲವೆಡೆ ಟ್ಯಾಂಕರ್‌ನಲ್ಲಿ ಕೆರೆ ನೀರು ತುಂಬಿಸಿ, ಜಮೀನುಗಳಿಗೆ ರವಾನಿಸಲಾಗುತ್ತಿದೆ. ಕೆರೆ ನೀರನ್ನೇ ನಂಬಿಕೊಂಡಿದ್ದ ಪ್ರಾಣಿ ಪಕ್ಷಿಗಳ ಪ್ರಾಣಕ್ಕೆ ಸಂಚಕಾರವಿದೆ. ಇನ್ನು ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು ಮೂಡಲ ಮುತ್ತಿನ ಕೆರೆಯ ನೀರೇ ಜೀವಾಳವಾಗಿದೆ.

ಭದ್ರಾ ನೀರು ಎದುರು ನೋಡುತ್ತಿರುವ ಜನತೆ: ‘ತಾಲ್ಲೂಕಿಗೆ ಜನಪ್ರತಿನಿಧಿಗಳು ಬಂದರೂ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೇ ಮಾತನಾಡುತ್ತಾರೆ. ಕಳೆದ 6 ವರ್ಷಗಳಿಂದಲೂ ಭದ್ರಾ ನೀರು ಬರುವುದನ್ನೇ ಎದುರು ನೋಡುತ್ತಿದ್ದೇವೆ. ಈ ಬಾರಿಯಾದರೂ ಭದ್ರೆ ಹೊಸದುರ್ಗಕ್ಕೆ ಬಂದರೆ ಸಾಕು’ ಎಂಬುದು ಇಲ್ಲಿಯವರ ಆಶಯ.

ಹೊಸದುರ್ಗದ ರಂಗವ್ವನಹಳ್ಳಿಯಲ್ಲಿ ಟ್ಯಾಂಕರ್ ನೀರು ತುಂಬಿಸಿಕೊಳ್ಳುತ್ತಿರುವ ಮಹಿಳೆಯರು
ವನಜಾಕ್ಷಮ್ಮ
20 ದಿನಗಳಿಂದಲೂ ಕುಡಿಯುವ ನೀರು ಪೂರೈಸಿಲ್ಲ. ಜಮೀನುಗಳಲ್ಲಿನ ಕೊಳವೆಬಾವಿ ನೀರನ್ನೇ ಕುಡಿಯುತ್ತಿದ್ದೇವೆ. ಪಕ್ಕದಲ್ಲೇ ವಿ.ವಿ ಸಾಗರ ಜಲಾಶಯವಿದ್ದರೂ ಉಪಯೋಗವಿಲ್ಲ. ಹೊಳಲ್ಕೆರೆ ಚಳ್ಳಕೆರೆಯವರು ನಮ್ಮ ನೀರು ಕುಡಿಯುತ್ತಾರೆ. ನಮಗೆ ನೀರಿಲ್ಲ.
ವನಜಾಕ್ಷಮ್ಮ ಲಕ್ಕಿಹಳ್ಳಿ
ದಿನ ಬೆಳಗಾದರೆ ನೀರಿನ ಚಿಂತೆ ಕಾಡುತ್ತಿದೆ. ಕೆಲಸಗಳನ್ನೆಲ್ಲಾ ಬಿಟ್ಟು ನೀರಿಗಾಗಿ ಸರದಿಯಲ್ಲಿ ನಿಲ್ಲಬೇಕು. ಟ್ಯಾಂಕರ್‌ ನೀರು ಸಾಲುತ್ತಿಲ್ಲ. ಜಾನುವಾರುಗಳಿಗೆ ಕುಡಿಸಲು ಬಟ್ಟೆ ತೊಳೆಯಲು ನೀರಿಲ್ಲದಂತಾಗಿದೆ.
ರಾಧಮ್ಮ ಶ್ರೀರಂಗಪುರ
ಪಕ್ಕದಲ್ಲೇ ಜಲಾಶಯ.. ಕುಡಿಯಲು ನೀರಿಲ್ಲ...
ತಾಲ್ಲೂಕಿನ ಲಕ್ಕಿಹಳ್ಳಿ ಮಾದಿಹಳ್ಳಿ ಮಾಡದಕೆರೆ ರಂಗವ್ವನಹಳ್ಳಿ ಹುಲ್ಲುಕಟ್ಟೆ ಸೇರಿ ಹಲವು ಗ್ರಾಮಗಳು ವಿವಿ ಸಾಗರದ ಜಲಾಶಯದ ತಪ್ಪಲಿನಲ್ಲಿವೆ. ಆದರೂ ನೀರಿಲ್ಲದೆ ಟ್ಯಾಂಕರ್‌ ನೀರನ್ನೇ ಬಳಸುವಂತಾಗಿದೆ. ‘ಕಳೆದ ವರ್ಷ ವಿ.ವಿ. ಸಾಗರ ಭರ್ತಿಯಾಗಿ ಈ ಭಾಗದ ರೈತರು ಕೈಗೆ ಬಂದ ಫಸಲನ್ನು ಕಳೆದುಕೊಂಡರು. ಈ ಬಾರಿ ಬರಗಾಲ. ಕೊಳವೆಬಾವಿಗಳಲ್ಲಿ ನೀರಿಲ್ಲ. ಟ್ಯಾಂಕರ್‌ ಮೂಲಕ ನೀರು ಹಾಕಲು ದುಪ್ಪಟ್ಟು ಹಣ ನೀಡುವಂತಹ ದುಃಸ್ಥಿತಿ ಬಂದೊದಗಿದೆ. ಪಕ್ಕದಲ್ಲೇ ಜಲಾಶಯವಿದ್ದರೂ ಟ್ಯಾಂಕರ್‌ ನೀರು ಮೊರೆ ಹೋಗಬೇಕು. ತಟ್ಟೆಯಲ್ಲೇ ಅನ್ನವಿದ್ದರೂ ಊಟ ಮಾಡಲಾಗದಂತಹ ಸ್ಥಿತಿ ಇದೆ’ ಎಂದು ಪೂಜಾರಹಟ್ಟಿ ಗ್ರಾಮದ ರೈತ ದಾಸಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.