ADVERTISEMENT

ಹೊಳಲ್ಕೆರೆ: ವಾರದ ಸಂತೆಗೆ ‘ಸ್ಥಳಾಂತರ’ದ ರೋಗ

ರಸ್ತೆ ಬದಿಯೇ ತರಕಾರಿ ಮಾರಾಟದ ಸ್ಥಳ

ಸಾಂತೇನಹಳ್ಳಿ ಸಂದೇಶ ಗೌಡ
Published 8 ಏಪ್ರಿಲ್ 2022, 5:48 IST
Last Updated 8 ಏಪ್ರಿಲ್ 2022, 5:48 IST
ಹೊಳಲ್ಕೆರೆಯ ವಾರದ ಸಂತೆಯ ಒಂದು ನೋಟ
ಹೊಳಲ್ಕೆರೆಯ ವಾರದ ಸಂತೆಯ ಒಂದು ನೋಟ   

ಹೊಳಲ್ಕೆರೆ: ಪಟ್ಟಣದಲ್ಲಿ ಭಾನುವಾರ ನಡೆಯುವ ವಾರದ ಸಂತೆಯಲ್ಲಿ ಮೂಲ ಸೌಕರ್ಯಗಳಿಲ್ಲದೇ ವ್ಯಾಪಾರಿಗಳು, ಗ್ರಾಹಕರು ಪರಿತಪಿಸುವಂತೆ ಆಗಿದೆ.

ಸದ್ಯಕ್ಕೆ ಹೊಸದುರ್ಗ ಮಾರ್ಗದ ಚಿಕ್ಕಕೆರೆ ಅಂಗಳದ ಕಿರಿದಾದ ಜಾಗದಲ್ಲಿ ಸಂತೆ ನಡೆಯುತ್ತಿದ್ದು, ವ್ಯಾಪಾರಿಗಳು ಮುಖ್ಯರಸ್ತೆಯ ಪಕ್ಕದಲ್ಲೇ ತರಕಾರಿ ವ್ಯಾಪಾರ ನಡೆಸುತ್ತಾರೆ. ಸ್ಥಳಾವಕಾಶದ ಕೊರತೆಯಿಂದ ಮುಖ್ಯರಸ್ತೆಯ ಪಕ್ಕದಲ್ಲೇ ಸೊಪ್ಪು, ತರಕಾರಿ, ದಿನಸಿ, ಕಬ್ಬಿಣದ ಸಾಮಾನುಗಳು, ಸುಣ್ಣ, ಮಡಕೆ, ಕುಡಿಕೆ ಮಾರಾಟ ಮಾಡಲಾಗುತ್ತದೆ. ಕೆರೆ ಅಂಗಳದಿಂದ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿ ಹಾಕಿರುತ್ತಾರೆ. ಕೆರೆಯ ಅಂಗಳದಲ್ಲಿ ನಾಲ್ಕು ಸಾಲಿಗೆ ಆಗುವಷ್ಟು ಜಾಗ ಇದ್ದು, ಅಲ್ಲಿಯೂ ಕೆಲವರು ತರಕಾರಿ ವ್ಯಾಪಾರ ಮಾಡುತ್ತಾರೆ.

ಬೆಳಿಗ್ಗೆ ವ್ಯಾಪಾರಿಗಳಿಗೆ ಹೋಲ್ ಸೇಲ್ ಆಗಿ ಮಾರಾಟ ಮಾಡಲು ತರಕಾರಿ ತರುವ ರೈತರು ಮುಖ್ಯರಸ್ತೆಯಲ್ಲೇ ಮಾರಾಟ ಮಾಡುತ್ತಾರೆ. ಕೆರೆ ಏರಿ ಮೇಲೆ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ಈ ಕಾಮಗಾರಿ ಮುಗಿದರೆ ಮತ್ತಷ್ಟು ಜಾಗದ ಕೊರತೆ ಆಗಲಿದೆ. ಮುಖ್ಯರಸ್ತೆಯ ಪಕ್ಕದಲ್ಲೇ ತರಕಾರಿ ವ್ಯಾಪಾರ ನಡೆಯುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಅಲ್ಲದೇ ರಸ್ತೆಗೆ ಹೊಂದಿಕೊಂಡೇ ಅಂಗಡಿ ಇಡುವುದರಿಂದ ಅಪಘಾತಗಳು ಆಗುವ ಸಂಭವವೂ ಇದೆ. ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಪಕ್ಕ ಅಂಗಡಿ ಹಾಕಲು ಅವಕಾಶ ಕೊಡಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ADVERTISEMENT

‘ಪುರಸಭೆಯವರು ನಮ್ಮಿಂದ ಬಾಡಿಗೆ ವಸೂಲಿ ಮಾಡುತ್ತಾರೆ. ಆದರೆ ಸಂತೆ ಸ್ಥಳದಲ್ಲಿ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಶೌಚಾಲಯ, ಕುಡಿಯುವ ನೀರಿಲ್ಲದೇ ವ್ಯಾಪಾರಿಗಳು, ಗ್ರಾಹಕರು ಪರದಾಡುವಂತೆ ಆಗಿದೆ. ನೆರಳಿನ ವ್ಯವಸ್ಥೆ ಇಲ್ಲದೆ ದಿನವಿಡೀ ಬಿಸಿಲು, ಮಳೆಯಲ್ಲೇ ವ್ಯಾಪಾರ ಮಾಡಬೇಕು’ ಎನ್ನುತ್ತಾರೆ ತರಕಾರಿ ವ್ಯಾಪಾರಿ ತುಳಜಾ ಭವಾನಿ.

‘ಸಂತೆಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ಮಳೆ ಬಂದರೆ ಕೆಸರು ತುಂಬಿಕೊಳ್ಳುತ್ತದೆ. ನಮಗೆ ಕಟ್ಟೆ ನಿರ್ಮಿಸಿ ನೆರಳು ಮಾಡಿಕೊಟ್ಟರೆ ಸಾಕು’ ಎನ್ನುತ್ತಾರೆ ಮತ್ತೊಬ್ಬ ತರಕಾರಿ ವ್ಯಾಪಾರಿ ನಾಗರಾಜ್.

‘ಪಟ್ಟಣದಲ್ಲಿ ವಾರದ ಸಂತೆಗೆ ಒಂದು ನಿಗದಿತ ಸ್ಥಳ ಇಲ್ಲ.ಇದುವರೆಗೆ ಏಳೆಂಟು ಜಾಗಕ್ಕೆ ಸಂತೆ ಸ್ಥಳಾಂತರ ಆಗಿದೆ. ಮೊದಲು ಬಸ್ ನಿಲ್ದಾಣದ ಹಿಂದೆ ನಡೆಯುತ್ತಿತ್ತು. ಈ ಜಾಗದಲ್ಲಿ ಕೋರ್ಟ್‌ ಕಟ್ಟಡ ನಿರ್ಮಾಣ ಆದ ಮೇಲೆ ತಾಲ್ಲೂಕು ಕಚೇರಿ ಹಿಂಭಾಗಕ್ಕೆ ಸಂತೆ ಬದಲಿಸಲಾಯಿತು. ನಂತರ ಸಿದ್ದರಾಮಪ್ಪ ಬಡಾವಣೆಯ ಮುಖ್ಯರಸ್ತೆಯ ಎರಡೂ ಬದಿ ಸಂತೆ ನಡೆಯುತ್ತಿತ್ತು. ಇಲ್ಲಿಂದ ದಾವಣಗೆರೆ ರಸ್ತೆಯ ಸಾಮಿಲ್ ಪಕ್ಕದ ಜಾಗಕ್ಕೆ ಕೆಲ ಕಾಲ ಸಂತೆ ಸ್ಥಳಾಂತರಗೊಂಡಿತು. ನಂತರ ಹೊಸದುರ್ಗ ಮಾರ್ಗದ ಚಿಕ್ಕ ಕೆರೆ ಅಂಗಳಕ್ಕೆ ಸಂತೆಯನ್ನು ಸ್ಥಳಾಂತರಿಸಲಾಯಿತು. ಇಲ್ಲಿ ಜಾಗದ ಕೊರತೆ ಎಂದು ಚಿತ್ರದುರ್ಗ ರಸ್ತೆಯ ಟೋಲ್ ಗೇಟ್ ಸಮೀಪ ಹೊನ್ನೆಕೆರೆ ಅಂಗಳಕ್ಕೆ ಸಂತೆ ಬದಲಿಸಲಾಯಿತು. ಸಂತೆಯ ಅಂಗಳದಲ್ಲಿ ಕೆರೆ ನೀರು ತುಂಬಿಕೊಂಡಿದ್ದರಿಂದ ಮತ್ತೆ ಚಿಕ್ಕಕೆರೆ ಅಂಗಳಕ್ಕೆ ಸಂತೆ ಬಂತು. ಮುಂದೆ ಸಂತೆ ಎಲ್ಲಿಗೆ ಸ್ಥಳಾಂತರ ಆಗುವುದೋ ಕಾದು ನೋಡಬೇಕಿದೆ’ ಎನ್ನುತ್ತಾರೆ ವ್ಯಾಪಾರಿಗಳು.

.....

ಸಂತೆಯಲ್ಲಿ ಮಹಿಳಾ ವ್ಯಾಪಾರಿಗಳು ಹೆಚ್ಚಿದ್ದಾರೆ. ಶೌಚಾಲಯ ಇಲ್ಲದೇ ಇವರೆಲ್ಲ ಹಿಂಸೆ ಅನುಭವಿಸುವಂತೆ ಆಗಿದೆ.

-ತುಳಜಾ ಭವಾನಿ, ತರಕಾರಿ ವ್ಯಾಪಾರಿ

......

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡಿನಿಂದ ಸೊಪ್ಪು ಮಾರಾಟ ಮಾಡಲು ಪ್ರತೀ ವಾರ ಇಲ್ಲಿಗೆ ಬರುತ್ತೇನೆ. ಸಂತೆಯಲ್ಲಿ ಜಾಗ ಇಲ್ಲದೆ ರಸ್ತೆ ಪಕ್ಕದಲ್ಲೇ ಕುಳಿತು ಮಾರಾಟ ಮಾಡುತ್ತೇನೆ. -

-ಸಿದ್ದಪ್ಪ, ಸೊಪ್ಪು ವ್ಯಾಪಾರಿ

.............

ತಹಶೀಲ್ದಾರ್‌ಗೆ ಮನವಿ

ಪಟ್ಟಣದಲ್ಲಿ ಸಂತೆ ನಡೆಸಲು ಜಾಗದ ಕೊರತೆ ಇದೆ. ಪಟ್ಟಣಕ್ಕೆ ಹತ್ತಿರದಲ್ಲಿ ಸರ್ಕಾರಿ ಜಾಗ ಇದ್ದರೆ ಮಂಜೂರು ಮಾಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಈಗ ಸಂತೆ ನಡೆಯುತ್ತಿರುವ ಜಾಗದಲ್ಲೇ ದೊಡ್ಡ ಶೆಡ್ ನಿರ್ಮಿಸುವ ಬಗ್ಗೆ ಶಾಸಕ ಎಂ. ಚಂದ್ರಪ್ಪ ನಮ್ಮೊಂದಿಗೆ ಚರ್ಚಿಸಿದ್ದಾರೆ’.

- ಎ. ವಾಸಿಂ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.