ADVERTISEMENT

ಪೌರತ್ವ ಕಾಯ್ದೆಯ ಅಗತ್ಯವೇನಿತ್ತು: ಕಾದಂಬರಿಕಾರ ಬಿ.ಎಲ್‌.ವೇಣು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 11:04 IST
Last Updated 22 ಡಿಸೆಂಬರ್ 2019, 11:04 IST
ಡಾ.ಬಿ.ಎಲ್‌.ವೇಣು
ಡಾ.ಬಿ.ಎಲ್‌.ವೇಣು   

ಚಿತ್ರದುರ್ಗ: ಮುಸ್ಲಿಂ ಸಮುದಾಯವನ್ನು ಮಾತ್ರ ಹೊರಗಿಟ್ಟು ರೂಪಿಸಿದ ಪೌರತ್ವ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯ ಏನಿತ್ತು ಎಂದು ಕಾದಂಬರಿಕಾರ ಬಿ.ಎಲ್‌.ವೇಣು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ನಮ್ಮ ದೇಶ ಮತ್ತು ನಾವು’ ಕವಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ದೇಶದ ಒಳಿತಿಗಾಗಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರುತ್ತಿರುವುದಾಗಿ ಜನರಲ್ಲಿ ಭ್ರಮೆ ಹುಟ್ಟಿಸಲಾಗುತ್ತಿದೆ. ಆದರೆ, ಕಾಯ್ದೆಯ ಆಶಯದಲ್ಲಿ ಒಳಿತು ಕಾಣುತ್ತಿಲ್ಲ. ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬುದ್ದಿಜೀವಿಗಳು, ಮಠಾಧೀಶರು ಏಕೆ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

‘ದೇಶ ಗಲಭೆಗಳ ಗೂಡಾಗಿದೆ. ಪ್ರಾಣಹಾನಿಗಳು ಸಂಭವಿಸುತ್ತಿವೆ. ಹಿಂದೂ–ಮುಸ್ಲಿಮರು ಪರಸ್ಪರ ಅನುಮಾನದಿಂದ ಕಾಣುವ ಸ್ಥಿತಿ ಸೃಷ್ಟಿಯಾಗಿದೆ. ರಾಷ್ಟ್ರೀಯತೆಯ ಸೋಗಿನಲ್ಲಿ ಹುಸಿ ದೇಶಭಕ್ತಿಯನ್ನು ಗೋಚರವಾಗುತ್ತಿದೆ. ಬಹುಮತವಿದೆ ಎಂಬ ಅಹಂಕಾರದಿಂದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ಸಂವಿಧಾನದ ಭದ್ರ ನೆಲೆಗಟ್ಟನ್ನು ಸಡಿಲಗೊಳಿಸಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಎಲ್ಲವನ್ನು ಬಿಟ್ಟು ಮಗ ಭಂಗಿ ನೆಟ್ಟ ಎಂಬಂತೆ ಪ್ರಧಾನಿ ಮೋದಿ ಪೌರತ್ವ ಕಾಯ್ದೆ ತಂದಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂದೂ ರಾಷ್ಟ್ರದ ಅಜೆಂಡಾ ಹೇರುವ ಹುನ್ನಾರ ಅಡಗಿದೆ ಎಂಬ ಗುಮಾನಿ ಕಾಡುತ್ತಿದೆ’ ಎಂದರು.

‘ಪೌರತ್ವ ಕಾಯ್ದೆಯಿಂದ ದೇಶ ಹೊತ್ತಿ ಉರಿಯುತ್ತಿದೆ. ಗುಜರಾತ್‌ ಸೇರಿ ಹತ್ತು ರಾಜ್ಯಗಳಲ್ಲಿ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ದೇಶದಲ್ಲೇ ಹುಟ್ಟಿ ಬೆಳೆದ ವ್ಯಕ್ತಿ ಭಾರತೀಯ ಪೌರ ಎಂಬುದನ್ನು ಸಾಭೀತಪಡಿಸಬೇಕು ಎಂಬುದು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.