ADVERTISEMENT

ದಕ್ಷಿಣ ಕನ್ನಡ ಜಿಲ್ಲೆ: ವಕೀಲರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:25 IST
Last Updated 25 ಮಾರ್ಚ್ 2011, 7:25 IST

ಮಂಗಳೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ ವಕಾಲತ್ ನಿಯಂತ್ರಣ ಕಾಯಿದೆ ವಿರೋಧಿಸಿ ರಾಜ್ಯಾದ್ಯಂತ ನೀಡಿದ ಕರೆಯಂತೆ ಗುರುವಾರ ನಗರ ಮತ್ತು ಜಿಲ್ಲೆಯಲ್ಲಿ ವಕೀಲರು ಕೆಂಪು ಪಟ್ಟಿ ಕಟ್ಟಿಕೊಂಡು ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಿದರು.ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರಿಗೆ ಈ ಸಂಬಂಧ ಪತ್ರ ಕಳುಹಿಸಿದ್ದೇವೆ ಎಂದು ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ತಿಳಿಸಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೇರಿದ ವಕೀಲರು, ಕಾಯ್ದೆಯನ್ನು ವಿರೋಧಿಸುವ ಘೋಷಣೆಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಇತರ ನ್ಯಾಯಾಲಯಗಳಲ್ಲೂ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು.

ಈಗಿರುವ ಕಾನೂನಿನಂತೆ ವಕೀಲರ ಮೇಲಿನ ಸಂಪೂರ್ಣ ನಿಯಂತ್ರಣ ಹಾಗೂ ಶಿಸ್ತು ಕ್ರಮ ಜರುಗಿಸುವ ಅಧಿಕಾರ ವಕೀಲರಿಂದಲೇ ಚುನಾಯಿತರಾದ ಸದಸ್ಯರನ್ನು ಒಳಗೊಂಡ ವಕೀಲರ ಪರಿಷತ್‌ಗೆ ಮಾತ್ರ ಇರುತ್ತದೆ. ಅಂತಹ ಯಾವುದೇ ಅಧಿಕಾರ ನ್ಯಾಯಾಲಯಕ್ಕಿಲ್ಲ ಎನ್ನುವುದು ವಕೀಲರ ಸಂಘಟನೆಗಳ ವಾದವಾಗಿದೆ.

ನೂತನ ಕಾಯ್ದೆಯಂತೆ ವಕೀಲರ ವಿರುದ್ಧ ದೂರುಗಳು ಕೇಳಿಬಂದರೆ, ವಿಚಾರಣೆ ನಡೆಸಿ ಶಿಕ್ಷಿಸುವ ಅಧಿಕಾರ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಮಂಡಳಿಗೆ ವಹಿಸಲಾಗಿದೆ. ವಕೀಲರ ಪರಿಷತ್ ಅಧಿಕಾರವನ್ನು ಮೊಟಕುಗೊಳಿಸುವುದು ಈ ಕಾಯ್ದೆಯ ಹಿಂದಿನ ಉದ್ದೇಶವಾಗಿದೆ ಎಂಬುದು ರಾಜ್ಯ ವಕೀಲರ ಪರಿಷತ್ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.