ADVERTISEMENT

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 9:50 IST
Last Updated 20 ಜನವರಿ 2026, 9:50 IST
   

ಪುತ್ತೂರು: ವಾಹನಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 106.60 ಕೆ.ಜಿ ತೂಕದ ಗಾಂಜಾವನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಅಶೋಕ್‌ ಲೈಲ್ಯಾಂಡ್‌ ಸರಕು ಸಾಗಾಟ ವಾಹನವನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್‌ ಪಿ. (37) ಹಾಗೂ ಅಬ್ದುಲ್ ಸಾದಿಕ್ (37) ಬಂಧಿತ ಆರೋಪಿಗಳು. ಅವರಿಂದ ವಶಪಡಿಸಿಕೊಂಡ ಗಾಂಜಾದ ಮೌಲ್ಯ ₹ 53.06 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಗಾಂಜಾ ಸಾಗಾಟದ ಕುರಿತು ಬಂದ ಮಾಹಿತಿ ಆಧಾರದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ತಾಲ್ಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಕಾರು ಹಾಗೂ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿದ್ದರು. ಚಾಲಕ ರಫೀಕ್‌ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಸಿಕ್ಕಿತ್ತು. ಬಳಿಕ ಗೂಡ್ಸ್ ವಾಹನದ ಚಾಲಕ ಅಬ್ದುಲ್ ಸಾದಿಕ್‌ ವರ್ತನೆಯಿಂದ ಸಂದೇಹ ಮೂಡಿ ಆ ವಾಹನವನ್ನೂ ತಪಾಸಣೆಗೆ ಒಳಪಡಿಸಿದ್ದರು. ಆ ವಾಹನದಲ್ಲಿ 106 ಕಿಲೋ 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಈ ಗಾಂಜಾ ಸೊಪ್ಪುಗಳನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಗಾಂಜಾ ಸಾಗಣೆಗೆ ಬಳಸಿದ ವಾಹನಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿ‍ಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.

ಠಾಣೆಯ ಪಿಎಸ್‌ಐ ಗುಣಪಾಲ ಜೆ., ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ, ವಿನೋದ್ ಅವರನ್ನು ಒಳಗೊಂಡ ತಂಡ ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.