ADVERTISEMENT

ಇ–ಕೆವೈಸಿ ಮಾಡಿಸದ 21,119 ಮಂದಿ

ಸರ್ಕಾರ ನೀಡಿರುವ ಗಡುವಿಗೆ ಒಂದು ದಿನವಷ್ಟೇ ಬಾಕಿ

ಸಂಧ್ಯಾ ಹೆಗಡೆ
Published 29 ಏಪ್ರಿಲ್ 2025, 5:46 IST
Last Updated 29 ಏಪ್ರಿಲ್ 2025, 5:46 IST

ಮಂಗಳೂರು: ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ರೇಷನ್ ಅಂಗಡಿಗಳಲ್ಲಿ ಇ– ಕೆವೈಸಿ ಮಾಡಿ ಸರ್ಕಾರ ನೀಡಿರುವ ಕೊನೆಯ ಅವಕಾಶ ಇನ್ನು ಒಂದು ದಿನದಲ್ಲಿ ಮುಕ್ತಾಯವಾಗಲಿದ್ದು, ಜಿಲ್ಲೆಯಲ್ಲಿ ಇನ್ನೂ 15,114 ಕಾರ್ಡ್‌ಗಳ 21,119 ಮಂದಿ ಫಲಾನುಭವಿಗಳು ಇ– ಕೆವೈಸಿ ಮಾಡಿಸದ ಕಾರ್ಡುದಾರರು ಉಳಿದುಕೊಂಡಿದ್ದಾರೆ.

ಏ.30ರ ಒಳಗೆ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುತ್ತದೆ. ಪಡಿತರ ಕಾರ್ಡ್‌ನಲ್ಲಿ ಹೆಸರು ಇರುವ ಸದಸ್ಯರು ಜೀವಂತ ಇರುವ ಬಗ್ಗೆ ಜೀವಮಾಪನ ಪತ್ರ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಗರಿಷ್ಠ 5,381 ಮಂದಿ ಇ– ಕೆವೈಸಿ ಮಾಡಿಸದವರು ಇದ್ದಾರೆ. ಅವರಲ್ಲಿ 907 ಮಂದಿ ಅಂತ್ಯೋದಯ ಕಾರ್ಡ್‌ದಾರರಾಗಿದ್ದರೆ, 4,474 ಮಂದಿ ಬಿಪಿಎಲ್ ಕಾರ್ಡ್‌ ಹೊಂದಿರುವವರು. ಸುಳ್ಯ ತಾಲ್ಲೂಕಿನಲ್ಲಿ ಕನಿಷ್ಠ 110 ಮಂದಿ ಇ– ಕೆವೈಸಿ ಮಾಡಿಸದವರು ಇದ್ದು, ಅವರಲ್ಲಿ 16 ಮಂದಿ ಅಂತ್ಯೋದಯ ಕಾರ್ಡ್‌ನವರು ಹಾಗೂ 94 ಮಂದಿ ಬಿಪಿಎಲ್‌ ಕಾರ್ಡ್‌ದಾರರು.

ADVERTISEMENT

ಅಂತ್ಯೋದಯ ಹಾಗೂ ಬಿಪಿಎಲ್ ಸೇರಿ ಬೆಳ್ತಂಗಡಿ ತಾಲ್ಲೂಕಿನಲ್ಲಿ 3,596, ಮಂಗಳೂರು 2,255, ಪುತ್ತೂರು 3,142, ಮೂಡುಬಿದಿರೆ 2,001, ಕಡಬ 2,014, ಮೂಲ್ಕಿ 1,034 ಹಾಗೂ ಉಳ್ಳಾಲ ತಾಲ್ಲೂಕಿನಲ್ಲಿ 1,586 ಮಂದಿ ಇನ್ನೂ ಇ– ಕೆವೈಸಿ ಮಾಡಿಸಲು ಬಾಕಿ ಇದ್ದವರು ಇದ್ದಾರೆ.

ಇ– ಕೆವೈಸಿ ಮಾಡಿಸುವಂತೆ ರೇಷನ್‌ ಕಾರ್ಡ್‌ದಾರರಿಗೆ ಸರ್ಕಾರ ನಾಲ್ಕು ವರ್ಷಗಳಿಂದ ಸೂಚನೆ ನೀಡುತ್ತಲೇ ಬಂದಿದೆ. ಈ ಬಾರಿ ಕೊನೆಯ ಅವಕಾಶ ನೀಡಿದ್ದು, ಇ– ಕೆವೈಸಿ ಬಾಕಿ ಉಳಿಸಿಕೊಂಡಿರುವವರಿಗೆ ರೇಷನ್ ನೀಡುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದು ಕುಟುಂಬದ ಎಲ್ಲ ಸದಸ್ಯರ ಇ–ಕೆವೈಸಿ ಮಾಡಿದಾಗ ಮಾತ್ರ, ಆ ಕಾರ್ಡ್‌ನ ಇ– ಕೆವೈಸಿ ಪೂರ್ಣಗೊಂಡಂತೆ ಆಗುತ್ತದೆ. ಒಂದೊಮ್ಮೆ ಮೃತಪಟ್ಟವರ ಹೆಸರು ಕಾರ್ಡ್‌ನಲ್ಲಿ ಉಳಿದುಕೊಂಡಿದ್ದರೆ ಅದನ್ನು ಕಡಿತ ಮಾಡಬೇಕು ಎನ್ನುತ್ತಾರೆ ಅಧಿಕಾರಿಗಳು.

ಇ–ಕೆವೈಸಿ ಮಾಡಿಸುವ ಸಂಬಂಧ ಜನಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಫಲಕಗಳಲ್ಲಿ ಸುತ್ತೋಲೆ ಪ್ರಕಟಿಸುವಂತೆ ತಿಳಿಸಲಾಗಿದೆ. ಎಲ್ಲ ರೇಷನ್‌ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಮಾಹಿತಿ ತಲುಪಿಸಲಾಗಿದೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನಿತಾ ವಿ. ಮಡ್ಲೂರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.