ನೆಲ್ಯಾಡಿ(ಉಪ್ಪಿನಂಗಡಿ): ನಸುಕಿನಲ್ಲಿ ಎದ್ದು, ಹಾಲು ಹಿಂಡಿ ಮತ್ತೆ 4ರಿಂದ 5 ಕಿ.ಮೀ. ದೂರದಲ್ಲಿರುವ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಹಾಕಲು ಕಷ್ಟಪಡುವ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಹೊಸ ವ್ಯವಸ್ಥೆಯನ್ನು ಕಂಡುಕೊಂಡಿದ್ದು, ಸಂಚಾರಿ ವಾಹನದ ಮೂಲಕ ಹೈನುಗಾರರ ಮನೆ ಬಾಗಿಲಿಗೆ ತೆರಳಿ ಹಾಲು ಖರೀದಿಸಲು ಆರಂಭಿಸಿದೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಶಿಫಾರಸ್ಸಿನಂತೆ ಯೂನಿಯೂನ್ ಬ್ಯಾಂಕ್ ಅನುದಾನದಲ್ಲಿ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಲೆಕ್ಟ್ರಾನಿಕ್ ವೆಹಿಕಲ್(ಇವಿ) ಗೂಡ್ಸ್ ರಿಕ್ಷಾ ಬಂದಿದೆ. ಸಂಘದ ವ್ಯಾಪ್ತಿಯ ನಿಗದಿತ ಸ್ಥಳಗಳಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಹೋಗಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಪ್ರಸ್ತುತ ಕಟ್ಟೆಮಜಲು ಹಾಗೂ ಹಳೆಮುಂಡ್ಲಕ್ಕೆ ತೆರಳಿ ಹಾಲು ಸಂಗ್ರಹ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ಹೈನುಗಾರರಿಗೆ ಬಹಳಷ್ಟು ಅನುಕೂಲ ಕಲ್ಪಿಸಿದೆ. ಹೈನುಗಾರರ ಸಮಯ ಉಳಿತಾಯದ ಜತೆಗೆ ವೆಚ್ಚಕ್ಕೆ ಕಡಿವಾಣ ಬಿದ್ದಿದೆ.
ವಾಹನವನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ:
ಎಲೆಕ್ಟ್ರಾನಿಕ್ ವೆಹಿಕಲ್ (ಇವಿ) ಗೂಡ್ಸ್ ವಾಹನವನ್ನು ಗ್ರಾಮೀಣ ಪ್ರದೇಶಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಏರು ಪ್ರದೇಶಗಳಿಗೆ ಅನುಕೂಲವಾಗುವಂತೆ ಗೇರ್ ಸಹ ಅಳವಡಿಸಿಕೊಳ್ಳಲಾಗಿದೆ. 550 ಕೆ.ಜಿ. ತನಕ ಇದರಲ್ಲಿ ಸಾಗಣೆ ಮಾಡಬಹುದಾಗಿದೆ. ಲಿಫ್ಟಿಂಗ್ ವ್ಯವಸ್ಥೆಯೂ ಸಹ ಇದೆ. ಎರಡು ಗಂಟೆ ಬ್ಯಾಟರಿ ಚಾರ್ಜ್ ಮಾಡಿದಲ್ಲಿ ಸುಮಾರು 80 ಕಿ.ಮೀ. ಓಡಾಟ ನಡೆಸಬಹುದಾಗಿದೆ. ಇದು ದಕ್ಷಿಣ ಕನ್ನಡ ಹಾ ಒಕ್ಕೂಟದ ಇತಿಹಾಸದಲ್ಲಿ ಮೊದಲ ಪ್ರಯೋಗವೂ ಆಗಿದೆ.
ಹಾಲು ಸಂಗ್ರಹ ಹೆಚ್ಚಳ:
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಳೆದ ಮಾರ್ಚ್ ತಿಂಗಳಿನಿಂದ ಇವಿ ಗೂಡ್ಸ್ ರಿಕ್ಷಾ ಮೂಲಕ ಹಾಲು ಸಂಗ್ರಹ ಆರಂಭಗೊಂಡಿದೆ. ಇದರಿಂದಾಗಿ ಹಾಲು ಸಂಗ್ರಹದಲ್ಲೂ ಹೆಚ್ಚಳಗೊಂಡಿದೆ. ಈ ಹಿಂದೆ ದಿನದಲ್ಲಿ 1,100 ಲೀಟರ್ ಹಾಲು ಸಂಗ್ರಹ ಆಗುತ್ತಿದ್ದು, ವಾಹನ ಬಂದ ಬಳಿಕ ದಿನವೊಂದಕ್ಕೆ 1,500 ಲೀಟರ್‌ನಷ್ಟು ಹಾಲು ಸಂಗ್ರಹ ಆಗುತ್ತಿದೆ. ಹಾಲು ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಂಘಕ್ಕೆ ಹಾಲು ಪೂರೈಸುವ ಹೈನುಗಾರರ ಸಂಖ್ಯೆಯೂ ಹೆಚ್ಚಳ ಆಗಿದೆ.
ಹೈನುಗಾರರು ಹೆಚ್ಚಳ; ಹಾಲಿನ ಕೊರತೆಯೂ ನೀಗಿತು:
ಹೈನುಗಾರರ ಅನುಕೂಲಕ್ಕಾಗಿ 3 ಸಾವಿರ ಲೀಟರ್ ಸಾಮರ್ಥ್ಯ ಸಾಂಧ್ರಶೀತಲೀಕರಣ ಘಟಕ ಆರಂಭಿಸಿದ್ದೇವು. ಇದರ ಸಾಮರ್ಥ್ಯವನ್ನು 5 ಸಾವಿರ ಲೀಟರ್‌ಗೆ ಹೆಚ್ಚಿಸಿದೆವು. ಆದರೆ ಹಾಲಿನ ಕೊರತೆ ಉಂಟಾಯಿತು. ನಾಲ್ಕೈದು ಕಿ.ಮೀ.ದೂರದಿಂದ ಹಾಲು ತರುವ ಹೈನುಗಾರರೂ ಇದ್ದರು. ಅವರಿಗಾಗಿ ಪ್ರಾಯೋಗಿಕವಾಗಿ ಖಾಸಗಿ ವಾಹನ ಬಳಸಿ ಆರಂಭಿಸಿದ್ದೆವು. ಇದು ಪ್ರಯೋಜನಕಾರಿ ಅನಿಸಿತು. ಸಂಚಾರಿ ವ್ಯವಸ್ಥೆ ಇದ್ದಲ್ಲಿ ಹೈನುಗಾರರಿಗೆ ಅನುಕೂಲವಾಗುತ್ತದೆ ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದೇವೆ. ಯೂನಿಯನ್ ಬ್ಯಾಂಕ್ ಒಕ್ಕೂಟಕ್ಕೆ ನೀಡಿದ ಇವಿ ಗೂಡ್ಸ್ ರಿಕ್ಷಾವನ್ನು ನಮ್ಮ ಸಂಘಕ್ಕೆ ನೀಡಿದ್ದಾರೆ. ಇದೀಗ ಹೈನುಗಾರರು ಹೆಚ್ಚಾಗಿದ್ದಾರೆ. ಹಾಲು ಸಂಗ್ರಹದಲ್ಲೂ ಹೆಚ್ಚಳವಾಗಿದೆ’ ಎಂದು ನೆಲ್ಯಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹೈನುಗಾರರ ಮನೆ ಬಾಗಿಲಿಗೆ ತೆರಳಿ ಸಂಗ್ರಹ 4ರಿಂದ 5 ಕಿ.ಮೀ ದೂರದಲ್ಲಿರುವ 2 ಹಳ್ಳಿಯ ಜನರಿಗೆ ಸೌಲಭ್ಯ ಪ್ರತಿದಿನ ಬೆಳಿಗ್ಗೆ, ಸಂಜೆ ಹಾಲು ಸಂಗ್ರಹ
ಹೈನುಗಾರರು ಹಾಲು ಕಡಿಮೆ ಸಿಗುವ ದಿನಗಳಲ್ಲಿ ಅಷ್ಟೊಂದು ದೂರ ಹೋಗಿ ಬರಬೇಕಲ್ಲ ಎಂದು ಹೈನುಗಾರಿಕೆಯನ್ನೇ ನಿಲ್ಲಿಸಿದ್ದರು. ಈ ಬಗ್ಗೆ ಚಿಂತಿಸುತ್ತಿದ್ದ ಸಂದರ್ಭದಲ್ಲೇ ವಾಹನ ವ್ಯವಸ್ಥೆ ದೊರೆತಿದೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಿದೆ.ಪ್ರೇಮಾವತಿ ನೆಲ್ಯಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.