ADVERTISEMENT

ಸೌದಿ ಅರೇಬಿಯಾದಲ್ಲಿ ಅಪಘಾತ: ಹಳೆಯಂಗಡಿ ಮೂಲದ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 12:27 IST
Last Updated 21 ಮಾರ್ಚ್ 2024, 12:27 IST
ಮೂಲ್ಕಿ ಬಳಿಯ ಹಳೆಯಂಗಡಿ ನಿವಾಸಿಯೊಬ್ಬರ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಗೊಂಡಿರುವುದು
ಮೂಲ್ಕಿ ಬಳಿಯ ಹಳೆಯಂಗಡಿ ನಿವಾಸಿಯೊಬ್ಬರ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಗೊಂಡಿರುವುದು   

ಮೂಲ್ಕಿ: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿ ಮೂಲದ ನಾಲ್ವರು ಸೌದಿ ಅರೇಬಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಿಯಾದ್ ಹೊರವಲಯದ ಝಲ್ವಾ ಎಂಬಲ್ಲಿ ಕತಾರ್ನಿಂದ ಮದೀನಕ್ಕೆ ಉಮ್ರಾ ನಿರ್ವಹಿಸಲು ತೆರಳುತ್ತಿದ್ದಾಗ ಹಳೆಯಂಗಡಿ ಬಳಿಯ ತೋಕೂರು ಶಾಲೆ ಬಳಿಯ ನಿವಾಸಿಗಳಾದ ಶಮೀಮ್, ಝರೀನಾ ದಂಪತಿ ಪುತ್ರಿ ಹಿಬಾ (29), ಆಕೆಯ ಪತಿ ಮಹಮ್ಮದ್ ರಮೀಝ್ (34), ಮಕ್ಕಳಾದ ಆರೂಶ್ (3), ರಾಹ (3 ತಿಂಗಳು) ಮೃತಪಟ್ಟವರು.

ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್ ಎಂಬುವರ ಪುತ್ರಿ ಫಾತಿಮಾ (19) ಗಂಭೀರ ಗಾಯಗೊಂಡಿದ್ದಾರೆ. ಹಿಬಾ ಅವರ ಮತ್ತೊಬ್ಬ ಸಹೋದರಿ ಲುಬ್ನಾ ಅವರ ಪುತ್ರ ಈಸ (4) ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಮೃತ ಹಿಬಾ ಅವರ ತಂದೆ ಶಮೀಮ್, ತಾಯಿ ಝರೀನಾ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಹಾಗೂ ಹಿಬಾ ಅವರ ಪತಿ, ಮಕ್ಕಳು, ಸಹೋದರಿಯ ಮಕ್ಕಳು ಮತ್ತೊಂದು ಕಾರಿನಲ್ಲಿ ಮಂಗಳವಾರ ಫಝರ್ ನಮಾಝ್ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್ ತಲುಪಿದ್ದ ಅವರು ಬುಧವಾರ ಮುಂಜಾನೆ ರಿಯಾದ್‌ನಿಂದ ಮತ್ತೆ ಉಮ್ರಾ ಯಾತ್ರೆ ಆರಂಭಿಸಿದ್ದರು. ರಮೀಝ್ ಅವರು ಕಾರು ಚಲಾಯಿಸುತ್ತಿದ್ದು, ಝಲ್ಲಾ ಎಂಬಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅವಘಡ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.