ADVERTISEMENT

ಕಾಸರಗೋಡು ಜಿಲ್ಲೆಯಲ್ಲಿ 60 ಮಂದಿ ಏಡ್ಸ್‌ರೋಗಿಗಳು

ಇಂದು ವಿಶ್ವ ಏಡ್ಸ್ ನಿಯಂತ್ರಣ ದಿನ

Pavitra Bhat
Published 1 ಡಿಸೆಂಬರ್ 2023, 4:58 IST
Last Updated 1 ಡಿಸೆಂಬರ್ 2023, 4:58 IST
ಎಚ್‌ಐವಿ, ಏಡ್ಸ್‌ ಪೀಡಿತರಿಗೆ ಅವಕಾಶ ನಿರಾಕರಣೆ ಅಪರಾಧ
ಎಚ್‌ಐವಿ, ಏಡ್ಸ್‌ ಪೀಡಿತರಿಗೆ ಅವಕಾಶ ನಿರಾಕರಣೆ ಅಪರಾಧ   

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ತಪಾಸಣೆ ಮಾಡಿಸಿಕೊಂಡವರ 60 ಮಂದಿ ಏಡ್ಸ್‌ರೋಗಿಗಳಿದ್ದಾರೆ.

ಕಳೆದ ವರ್ಷದ ಏಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗಿನ ಅವಧಿಯಲ್ಲಿ 42 ಮಂದಿಯಲ್ಲಿ, ಈ ವರ್ಷ ಮಾರ್ಚ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 18 ಮಂದಿಯಲ್ಲಿ ಈ ಸೋಂಕು ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶ ತಿಳಿಸಿದೆ.

ಮಾರ್ಚ್‌ವರೆಗೆ 9,254 ಮಂದಿ ಗರ್ಭಿಣಿಯರೂ ಸೇರಿ 34,697 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈ ಪೈಕಿ 42 ಮಂದಿಗೆ ಎಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ. ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿಲ್ಲ. ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ 15,029 ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈ ಪೈಕಿ 3,742 ಮಂದಿ ಗರ್ಭಿಣಿಯರಾಗಿದ್ದರು. 180 ಮಂದಿಗೆ ಎಚ್‌ಐವಿ ಸೋಂಕು ಪತ್ತೆಯಾಗಿದ್ದು, ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿಲ್ಲ.

ADVERTISEMENT

ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಎಚ್‌ಐವಿ ಚಿಕಿತ್ಸಾ ಕೇಂದ್ರ ಉಷಸ್‌ನಲ್ಲಿ ಎಚ್‌ಐವಿ ಬಾಧಿತರಿಗೆ ಉಚಿತವಾಗಿ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಲಭ್ಯವಿದೆ. ಈಗ 915 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 464 ಮಂದಿ ಮಹಿಳೆಯರು. ಈ ವರ್ಷ 451 ರೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಾಞಂಗಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪುಲರಿ ಎಂಬ ಹೆಸರಿನಲ್ಲಿ ಇದೇ ರೀತಿಯ ಚಿಕಿತ್ಸಾ ಕೇಂದ್ರವಿದೆ. 2022ರ ಏಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗೆ ಇಲ್ಲಿ 1603 ಮಂದಿ ತಪಾಸಣೆಗೊಳಗಾಗಿದ್ದಾರೆ. ಇವರಲ್ಲಿ ಎಚ್ಐವಿ ಸೋಂಕು ಪತ್ತೆಯಾಗದಿದ್ದರೂ, ಸಿಫಿಲಿಸ್ ರೋಗ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲಾ ಪಂಚಾಯಿತಿಯಿಂದ ಎಚ್ಐವಿ ಬಾಧಿತರಿಗೆ ಪೋಷಕಾಹಾರ ವಿತರಣೆ ನಡೆಯುತ್ತಿದೆ. ಶೀಘ್ರದಲ್ಲಿ ವಸತಿ ನಿರ್ಮಾಣ ಯೋಜನೆಯನ್ನೂ ನಡೆಸಲಾಗುವುದು ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪಿ.ಬೇಬಿ ಬಾಲಕೃಷ್ಣನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.