ADVERTISEMENT

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:50 IST
Last Updated 7 ಸೆಪ್ಟೆಂಬರ್ 2025, 8:50 IST
   

ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿದ್ದಾರೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಿವಾಸಿ ಶಶಿಕುಮಾರ್ (38) ಬಂಧಿತ ಆರೋಪಿ. ಈತ ಆ.29ರಂದು ರಾತ್ರಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ, 'ಟರ್ಮಿನಲ್ ಬಿಲ್ಡಿಂಗ್ ಅನ್ನು ಖಾಲಿ ಮಾಡಬೇಕು. ಇಲ್ಲವಾದರೆ ಧ್ವಂಸ ಮಾಡುತ್ತೇನೆ' ಎಂದು ಬೆದರಿಕೆ ಹಾಕಿದ್ದ.

ಕರ್ತವ್ಯ ನಿರತ ಟರ್ಮಿನಲ್ ವ್ಯವಸ್ಥಾಪಕರು, ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2), 351(3) ಮತ್ತು 1982ರ ನಾಗರಿಕ ವಿಮಾನಯಾನದ‌ ಸುರಕ್ಷತೆ ವಿರುದ್ಧವಾದ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 3(1)ರ ಅಡಿ ಪ್ರಕರಣ‌ ದಾಖಲಾಗಿತ್ತು.

ADVERTISEMENT

ಆರೋಪಿಯನ್ನು ವೆಲ್ಲೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 'ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಸಂಪರ್ಕ‌ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ, ಕರೆ ಮಾಡಿ ಬೆದರಿಕೆ ಹಾಕಿದ್ದೆ. ಅದೇ ತರಹ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಫೋನ್ ಮಾಡಿ ಟರ್ಮಿನಲ್ ಬಿಲ್ಡಿಂಗ್ ಅನ್ನು ಖಾಲಿ ಮಾಡದೆ ಹೋದರೆ ಅದನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದೆ' ಎಂದು ಒಪ್ಪಿಕೊಂಡಿದ್ದ.

ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.