ADVERTISEMENT

ಸೋಮೇಶ್ವರ ಪುರಸಭೆ | 'ಅಮೃತರ ಹೆಸರಿಡಲು ಸರ್ವಾನುಮತ'

ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:35 IST
Last Updated 10 ಸೆಪ್ಟೆಂಬರ್ 2025, 7:35 IST
ಸೋಮೇಶ್ವರ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಸೋಮೇಶ್ವರ ಪುರಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಉಳ್ಳಾಲ: ಸೋಮೇಶ್ವರ-ಬಟ್ಟಪ್ಪಾಡಿ ಬೀಚ್ ಸಂಪರ್ಕ ರಸ್ತೆಗೆ ‘ಸಾಹಿತಿ ಅಮೃತ ಸೋಮೇಶ್ವರ’ ರಸ್ತೆ ಎಂದು ನಾಮಕರಣ ಮಾಡಲು ಮಂಗಳವಾರ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಈ ಬಗ್ಗೆ ಸದಸ್ಯ ಹರೀಶ್ ಕುಂಪಲ ಮಾತನಾಡಿ‌, ಅಮೃತ ಸೋಮೇಶ್ವರ ಅವರು ನಮ್ಮ ಸೋಮೇಶ್ವರಕ್ಕೆ ಕಳಸವಿದ್ದಂತೆ. ನಮ್ಮ ಊರಿನ ಹೆಸರನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವಂತೆ‌ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂಥವರ ಹೆಸರು ನಮ್ಮ ರಸ್ತೆಗೆ ಇಡುವುದು ಹೆಮ್ಮೆಯ ವಿಚಾರ ಎಂದರು.

ಇದಕ್ಕೆ ಉಪಾಧ್ಯಕ್ಷ ರವಿಶಂಕರ್ ಮತ್ತು ವಿರೋಧ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.

ADVERTISEMENT

ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಮತ್ತಡಿ, ಈ ಹೆಸರಿನಿಂದ ಬಟ್ಟಪಾಡಿ ಹೆಸರು ಅಳಿಸಿಹೋಗುವುದಿಲ್ಲ. ಒಂದು ರಸ್ತೆಗೆ ಮಾತ್ರ ಅಮೃತ ಸೋಮೇಶ್ವರ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಬಟ್ಟಪ್ಪಾಡಿ ತೆಗೆದು ಅಮೃತ‌ಸೋಮೇಶ್ವರ ಎಂದು ಮರು ನಾಮಕರಣ ಮಾಡಿಲ್ಲ. ಎಲ್ಲರ ಒಪ್ಪಿಗೆಯಂತೆ ಆಕ್ಷೇಪಣೆ ರದ್ದು ಪಡಿಸಲಾಗುವುದು ಎಂದರು‌.

ಇಲ್ಲಿನ ಖಾಸಗಿ ಆಸ್ಪತ್ರೆಯ ಹಾಸ್ಟೆಲ್‌ನಿಂದ ಬಿಡುತ್ತಿರುವ ಹಳದಿ ಮಿಶ್ರಿತ ಕೊಳಚೆ ನೀರು ರಸ್ತೆಗೆ ಬಂದು ಶಾಲೆಯ ಮಕ್ಕಳು, ಜನರು ನಡೆದಾಡಲು ಅಸಾಧ್ಯವಾದಂತಹ ವಾತವರಣ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವಂತೆ ಅಧಿಕಾರಿಗಳಲ್ಲಿ ತಿಳಿಸಿದ್ದಎಊ ಸ್ಪಂದಿಸಿಲ್ಲ. ಸರಿಪಡಿಸದೆ ಇದ್ದರೆ ಊರಿನವರು ಸೇರಿ ಅದನ್ನು ಅಲ್ಲಿಯೇ ಸಿಮೆಂಟ್ ‌ಹಾಕಿ ಶಾಶ್ವತವಾಗಿ ‌ಮುಚ್ಚುವಂತೆ ಮಾಡುತ್ತೇವೆ ಎಂದು ಸದಸ್ಯೆ ಸಪ್ನ ಶೆಟ್ಟಿ ಹೇಳಿದರು.

ಉತ್ತರಿಸಿದ ಸೋಮೇಶ್ವರ ಪುರಸಭೆ ಅಧಿಕಾರಿಗಳು, ಸಂಬಂಧಪಟ್ಟ ಸಂಸ್ಥೆಗೆ ಈಗಾಗಲೇ ಪಂಚಾಯಿತಿಯಿಂದ ಪತ್ರ ಬರೆಯಲಾಗಿದೆ. ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.‌

ಬೀದಿ ನಾಯಿಗಳ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ಮನೋಜ್ ಕಟ್ಟೆಮನೆ ಪ್ರಸ್ತಾಪಿಸಿದರು.

ಈ ಬಗ್ಗೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಕಳೆದ ಬಾರಿ 300ಕ್ಕೂ ಅಧಿಕ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲಾಗಿದೆ ಎಂದರು‌.‌

ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಅವುಗಳಲ್ಲಿ 14 ವಾರ್ಡ್‌ಗಳಲ್ಲಿ ಮಾತ್ರ ಅಂಗನವಾಡಿ ಇದೆ. ಅಲ್ಲಲ್ಲಿ ಬೇಬಿ ಸಿಟ್ಟಿಂಗ್, ಡೇ ಕೇರ್‌ಗಳು ಹೆಚ್ಚಾಗುತ್ತಿವೆ. ಅಂಗನವಾಡಿಗೆ ಸ್ಥಳಾವಕಾಶವನ್ನು ನಾವು ಕೊಡುತ್ತೇವೆ. ಎಲ್ಲ ವಾರ್ಡ್‌ಗಳಿಗೂ ಒಂದೊಂದು ಅಂಗನವಾಡಿ ಕೇಂದ್ರ ಬೇಕು ಎಂದು ಸದಸ್ಯ ಹರೀಶ್, ಸಲಾಮ್ ಉಚ್ಚಿಲ್ ಹೇಳಿದರು.

ಯಾವ ವಾರ್ಡ್‌ನಲ್ಲಿ ಅಂಗನವಾಡಿ ಬೇಕು ಎಂದು ನಿರ್ಣಯ ತೆಗೆದುಕೊಂಡು ವಾರ್ಡ್‌ ಮೂಲಕ ಅರ್ಜಿ ನೀಡಬೇಕು. ಸೂಚಿಸಿದ ಜಾಗದಲ್ಲಿ ಸರ್ವೆ ನಡೆಸಲಾಗುವುದು. ಕನಿಷ್ಠ 15 ಮಕ್ಕಳಾದರೂ ಕಡ್ಡಾಯವಾಗಿ ಇರಲೇಬೇಕು. ಆಗ ಮಾತ್ರ ಅಂಗನವಾಡಿ ತೆರೆಯಬಹುದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಭಾಗವಹಿಸಿದದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.