ADVERTISEMENT

ಹಳದಿ ಎಲೆಗೆ ಹಾಳಾದ ಅಡಿಕೆ ಬೆಳೆಗಾರರ ಬದುಕು: ತೋಟಕ್ಕೆ ತಲುಪದ ಸಂಶೋಧನೆ

ಚಿದಂಬರ ಪ್ರಸಾದ್
Published 7 ಅಕ್ಟೋಬರ್ 2020, 20:30 IST
Last Updated 7 ಅಕ್ಟೋಬರ್ 2020, 20:30 IST
ತರೀಕೆರೆ ತಾಲ್ಲೂಕಿನ ಅಮೃತಾಪುರ ಹೋಬಳಿಯಲ್ಲಿನ ಅಡಿಕೆ ತೋಟ
ತರೀಕೆರೆ ತಾಲ್ಲೂಕಿನ ಅಮೃತಾಪುರ ಹೋಬಳಿಯಲ್ಲಿನ ಅಡಿಕೆ ತೋಟ   

ಮಂಗಳೂರು: ಭತ್ತಕ್ಕಿಂತ ಹೆಚ್ಚು ಆದಾಯ ತಂದುಕೊಟ್ಟಿದ್ದ ಅಡಿಕೆ ಬೆಳೆಯು ಹಳದಿ ಎಲೆ ರೋಗ ಬಾಧೆಗೆ ತುತ್ತಾಗಿದೆ.ಕರಾವಳಿಯ ಸುಳ್ಯ ತಾಲ್ಲೂಕು ಹಾಗೂ ಮಲೆನಾಡಿನ ಕೊಪ್ಪ, ಶೃಂಗೇರಿ ತಾಲ್ಲೂಕುಗಳಲ್ಲಿಯೇ ಈ ರೋಗ ವ್ಯಾಪಕವಾಗಿದೆ.

ನೆರೆಯ ಕಾಸರಗೋಡು ಜಿಲ್ಲೆಯ ಹಲವೆಡೆಯೂ ಹಳದಿ ಎಲೆ ರೋಗದ ಬಾಧೆ ಕಂಡುಬಂದಿದೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್‌, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,043.38 ಹೆಕ್ಟೇರ್ ಪ್ರದೇಶ ಬಾಧಿತವಾಗಿದೆ.

ರೋಗಕ್ಕೊಂದು ಶಾಶ್ವತ ಪರಿಹಾರ ನೀಡಬೇಕಾದ ಸರ್ಕಾರ, ನಷ್ಟ ಅನುಭವಿಸಿದ ಸಂದರ್ಭದಲ್ಲಿ ಅಷ್ಟಿಷ್ಟು ಪರಿಹಾರ ನೀಡುತ್ತದೆ. ಆದರೆ, ಆ ಪರಿಹಾರವೇ ತೋಟಗಳಲ್ಲಿನ ಅಡಿಕೆ ಗಿಡಗಳನ್ನು ಕತ್ತರಿಸುವುದಕ್ಕೆ ಬಳಕೆಯಾಗುತ್ತಿರುವುದು ವಾಸ್ತವ ಎನ್ನುತ್ತಾರೆ ಅಡಿಕೆ ಬೆಳೆಗಾರರು.

ADVERTISEMENT

ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ನಿರಂತರ ಸಂಶೋಧನೆ: ಕಾಸರಗೋಡಿನ ಸಿಪಿಸಿಆರ್‌ಐನಿಂದ ₹7 ಕೋಟಿ ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣ ಅಧ್ಯಯನ ಆರಂಭಿಸಲಾಗಿದೆ. ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎನ್ನುತ್ತಾರೆ ವಿಟ್ಲ ಸಿಪಿಸಿಆರ್‌ಐನ ಡಾ.ಸಿ.ಟಿ. ಜೋಸ್‌.

‘ಚಿಕ್ಕಮಗಳೂರು ಜಿಲ್ಲೆ, ಸುಳ್ಯ ಭಾಗದಲ್ಲಿ ಸಾವಿರಾರು ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಿಕೆಗೆ ಹಳದಿ ಎಲೆ ರೋಗ ವ್ಯಾಪಿಸಿದೆ. ಬದಲಿ ಬೆಳೆ, ಬದಲಿ ತೋಟ ನಿರ್ಮಾಣ ಸಂಬಂಧ ರೈತರಿಗೆ ಸಲಹೆ ನೀಡಬೇಕಾಗಿದೆ. ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು’ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭರವಸೆ ನೀಡಿದ್ದಾರೆ.

ಗಿಡದಿಂದ ಗಿಡಕ್ಕೆ ಪಸರಿಸುವ ರೋಗ

ಅಡಿಕೆ ಮರದ ಗರಿಯ ಅಂಚು ಹಳದಿಯಾಗುವುದು, ಇಳುವರಿ ಕಡಿಮೆಯಾಗುವುದು, ಶಿರ ಭಾಗ ಸಣಕಲಾಗುವುದಕ್ಕೆ ಹಳದಿ ಎಲೆ ರೋಗ ಎನ್ನಲಾಗುತ್ತದೆ. ಗಿಡದಿಂದ ಗಿಡಕ್ಕೆ ಪಸರಿಸುತ್ತಲೇ ಹೋಗುತ್ತದೆ. ರೋಗ ಬಾಧಿತ ಅಡಿಕೆಯು ಕಂದು ಬಣ್ಣದ್ದಾಗಿದ್ದು, ಸೇವನೆಗೆ ಯೋಗ್ಯವಾಗಿರುವುದಿಲ್ಲ.

ರೋಗ ನಿಯಂತ್ರಣಕ್ಕೆ ಸದ್ಯ ಹಸಿರೆಲೆ ಮತ್ತು ತಿಪ್ಪೆಗೊಬ್ಬರ ಒದಗಿಸಬೇಕು. 1 ಕಿ.ಗ್ರಾಂ. ಫಾಸ್ಪೇಟ್ ಗೊಬ್ಬರ, 2 ಕಿ.ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು. ಬಸಿಗಾಲುವೆ ನಿರ್ಮಿಸಬೇಕು ಎನ್ನುವುದು ತೋಟಗಾರಿಕೆ ಇಲಾಖೆಯ ಸಲಹೆ.

***

‘ಫಸಲು ವಿಪರೀತ ಕಡಿಮೆಯಾಗಿದೆ. ಅಡಿಕೆಯನ್ನು ತುಂಬ ವರ್ಷಗಳಿಂದ ನಂಬಿಕೊಂಡಿದ್ದೆವು. ಈಗ ಅದರ ಸಹವಾಸವೇ ಬೇಡ ಎನಿಸಿದೆ. ಅಡಿಕೆ ಗಿಡಗಳ ಮಧ್ಯೆ ಕಾಫಿ ಗಿಡಗಳನ್ನು ನೆಟ್ಟಿದ್ದೇವೆ

– ಶಿವಶಂಕರ್ ಸಸಿಮನೆ, ಶೃಂಗೇರಿ ತಾಲ್ಲೂಕಿನ ಕೃಷಿಕ

ಕೊಳೆರೋಗಕ್ಕೆ ಸರ್ಕಾರ ಪ್ರತಿ ಹೆಕ್ಟೇರ್ ತೋಟಕ್ಕೆ ₹ 18 ಸಾವಿರ ಪರಿಹಾರ ನೀಡುತ್ತದೆ. ಹಳದಿಎಲೆ ರೋಗಕ್ಕೆ ಪರಿಹಾರ ನೀಡಿಲ್ಲ. ಗೋರಖ್‌ ಸಿಂಗ್ ವರದಿಯಲ್ಲಿ ಪರಿಹಾರಕ್ಕೆ ಸೂಚಿಸಿದ್ದರೂ ಯಾವ ಸರ್ಕಾರಗಳೂ ಕ್ರಮ ಕೈಗೊಂಡಿಲ್ಲ.

– ಕೆ.ಸಿ.ಮಲ್ಲಿಕಾರ್ಜುನ, ಅಡಿಕೆ ಬೆಳೆಗಾರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.