ADVERTISEMENT

ಮಾಂಸ ಸಾಗಿಸುತ್ತಿದ್ದ ರಿಕ್ಷಾ ಚಾಲಕನ ಮೇಲೆ ಮಂಗಳೂರಿನಲ್ಲಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 11:53 IST
Last Updated 21 ಜೂನ್ 2020, 11:53 IST
ಹಾನಿಯಾಗಿರುವ ರಿಕ್ಷಾ (ಎಡಚಿತ್ರ). ಘಟನಾ ಸ್ಥಳದಲ್ಲಿ ಜನ ಸೇರಿರುವುದು.
ಹಾನಿಯಾಗಿರುವ ರಿಕ್ಷಾ (ಎಡಚಿತ್ರ). ಘಟನಾ ಸ್ಥಳದಲ್ಲಿ ಜನ ಸೇರಿರುವುದು.   

ಮಂಗಳೂರು: ಕುದ್ರೋಳಿಯ ಕಸಾಯಿಖಾನೆಯಿಂದ ಕಂಕನಾಡಿಯ ಮಾರುಕಟ್ಟೆಗೆ ಪರವಾನಗಿಯೊಂದಿಗೆ ಮಾಂಸ ಸಾಗಣೆ ಮಾಡುತ್ತಿದ್ದ ರಿಕ್ಷಾ ಚಾಲಕನ ಮೇಲೆ ಕಂಕನಾಡಿ ಬಳಿ ಭಾನುವಾರ ಬೆಳಿಗ್ಗೆ ಹಲ್ಲೆ ಮಾಡಲಾಗಿದೆ.

ಕುದ್ರೋಳಿಯ ರಶೀದ್ ಅವರು ತಮ್ಮ ರಿಕ್ಷಾದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕೀರ್‌ ಅವರ ಅಂಗಡಿಗೆ ಸುಮಾರು 200 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಣೆ ಮಾಡುತ್ತಿದ್ದರು. ಈ ವೇಳೆ ಸುಮಾರು ಐದಾರು ಮಂದಿಯ ತಂಡ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು, ಹೈಲ್ಯಾಂಡ್ ಆಸ್ಪತ್ರೆ ಮತ್ತು ಕಂಕನಾಡಿ ಮಾರುಕಟ್ಟೆ ರಸ್ತೆ ಮಧ್ಯೆ ರಿಕ್ಷಾ ತಡೆದು ನಿಲ್ಲಿಸಿತು.

ಬಳಿಕ ಚಾಲಕ ರಶೀದ್‌ ಮೇಲೆ ಹಲ್ಲೆ ಮಾಡಿದ್ದು, ರಿಕ್ಷಾಕ್ಕೆ ಹಾನಿ ಮಾಡಲಾಗಿದೆ. ಮಾಂಸಕ್ಕೆ ಸೀಮೆಎಣ್ಣೆ ಸುರಿದಿದ್ದಾರೆ. ಈ ಸಂದರ್ಭ ದಾರಿಹೋಕರು ಜಮಾಯಿಸುವುದನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಕುದ್ರೋಳಿ ಕಸಾಯಿಖಾನೆಯಿಂದ ಪರವಾನಗಿ ಪಡೆದು ಮಾಂಸ ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ದುಷ್ಕರ್ಮಿಗಳ ಕೃತ್ಯವನ್ನು ಮಾಂಸ ವ್ಯಾಪಾರಸ್ಥರ ಸಂಘ ಹಾಗೂ ಕಂಕನಾಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ಅಲಿ ಹಸನ್ ಖಂಡಿಸಿದ್ದಾರೆ.

ಖಂಡನೆ: ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಘ ಪರಿವಾರದ ಗೂಂಡಾಗಿರಿ ಮಿತಿ ಮೀರುತ್ತಿದೆ. ವಾರದ ಹಿಂದೆ ಜೋಕಟ್ಟೆಯ ಜಾನುವಾರು ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ್ದು, ಕಂಕನಾಡಿ ಮಾರ್ಕೆಟ್‌ಗೆ ಮಾಂಸ ಸಾಗಣೆ ಮಾಡುತ್ತಿದ್ದ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಯನ್ನು ಖಂಡಿಸುವುದಾಗಿ ಎಸ್‌ಡಿಪಿಐ ಹೇಳಿದೆ.

ಕಮಿಷನರೇಟ್‌ ವ್ಯಾಪ್ತಿಯ ಪೊಲೀಸರ ವೈಫಲ್ಯದಿಂದ ಸಂಘ ಪರಿವಾರ ಗೂಂಡಾಗಿರಿಯ ಮೂಲಕ ಜಿಲ್ಲೆಯಲ್ಲಿ ಧ್ವೇಷವನ್ನು ಹರಡಿಸಿ, ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಸುಹೈಲ್ ಖಾನ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.