ADVERTISEMENT

ಮಂಗಳೂರು | ಗೋಮಾಂಸ ಸಾಗಾಟ ಆರೋಪ: ತಂದೆ, ಮಗಳನ್ನು ಅಡ್ಡಗಟ್ಟಿ ಹಲ್ಲೆ

ಮತೀಯ ಗೂಂಡಾಗಿರಿ: ಇಬ್ಬರು ಯುವಕರ ವಿರುದ್ಧ ಎಫ್‌ಐಆರ್‌; ಗೋಮಾಂಸ ಸಾಗಿಸಿದ ಆರೋಪಿ ವಿರುದ್ಧವೂ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 19:48 IST
Last Updated 27 ಡಿಸೆಂಬರ್ 2025, 19:48 IST
ಬಾಲಕಿಯ ಕಾಲು ಗಾಯಗೊಂಡಿರುವುದು
ಬಾಲಕಿಯ ಕಾಲು ಗಾಯಗೊಂಡಿರುವುದು   

ಮಂಗಳೂರು: ತಾಲ್ಲೂಕಿನ ಮಳಲಿ ನಾರ್ಲಪದವು ಬಳಿ ಮಗಳ (11) ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಟಾಟಾ ಸುಮೊ ವಾಹನದಲ್ಲಿ ಬಂದ ಯುವಕರಿಬ್ಬರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಬೈಕಿನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಈ ಬಗ್ಗೆಯೂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

‘ಮೂಲರಪಟ್ಣದ ಅಬ್ದುಲ್ ಸತ್ತಾರ್‌ ಹಲ್ಲೆಗೆ ಒಳಗಾದವರು. ಎಡ‍ಪದವಿನ ಸುಮಿತ್ ಭಂಡಾರಿ (21), ರಜತ್ ನಾಯ್ಕ್‌ (30) ಹಲ್ಲೆ ನಡೆಸಿದ ಆರೋಪಿಗಳು. ಸುಮಾರು 19 ಕೆ.ಜಿ. ಗೋಮಾಂಸವನ್ನು ಅಧಿಕೃತ
ದಾಖಲೆಗಳಿಲ್ಲದೆಯೇ ಬೈಕಿನಲ್ಲಿ ಸಾಗಿಸಿದ್ದಕ್ಕೆ ಆರೋಪಿ ಅಬ್ದುಲ್ ಸತ್ತಾರ್‌ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ’ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ ತಿಳಿಸಿದಾರೆ. 

ಘಟನೆ ವೇಳೆ ಬೈಕ್‌ ರಸ್ತೆಗೆ ಬಿದ್ದಿದ್ದು, ಬಿಸಿಯಾಗಿದ್ದ ಸೈಲೆನ್ಸರ್‌ ತಾಗಿ ಬಾಲಕಿಗೆ ಕಾಲಿನಲ್ಲಿ ಸುಟ್ಟ ಗಾಯ ಗಳಾಗಿವೆ. ಘಟನೆ ಬಳಿಕ ಅಬ್ದುಲ್ ಸತ್ತಾರ್‌ ಪರಾರಿ ಯಾಗಿದ್ದಾರೆ. ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ
ಸೇರಿಸಿ ದ್ದರು.

ADVERTISEMENT

‘ಆರೋಪಿಗಳಾದ ಸುಮಿತ್ ಭಂಡಾರಿ  ಹಾಗೂ ರಜತ್ ನಾಯ್ಕ್‌ನನ್ನು ಠಾಣೆಗೆ ಕರೆಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಅಬ್ದುಲ್ ಸತ್ತಾರ್ ಗೋಮಾಂಸ ಸರಬರಾಜು ಮಾಡುತ್ತಿದ್ದ ಮಾಹಿತಿ ಇದೆ. ಆತ ಸಿಕ್ಕಿಲ್ಲ’ ಎಂದು ಅವರು ತಿಳಿಸಿದ್ದಾರೆ. 

‌‘ಮತ್ತೊಬ್ಬ ಯುವಕನ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ‘ಆತನೂ ಹಲ್ಲೆ ನಡೆಸಿದ್ದ’ ಎಂದು ಸುದ್ದಿ ಹಬ್ಬಿಸಲಾಗಿದೆ. ಈ ಪ್ರಕರಣದಲ್ಲಿ ಆ ಯುವಕನ ಪಾತ್ರವಿರುವುದು ಖಚಿತವಾಗಿಲ್ಲ. ಆತನ ಪಾತ್ರ ಇಲ್ಲದಿದ್ದರೆ, ಈ ಬಗ್ಗೆ ಸುದ್ದಿ ಹಬ್ಬಿಸಿದವರ ವಿರುದ್ಧವೂ ಕ್ರಮಕೈಗೊಳ್ಳಲಿದ್ದೇವೆ’ ಎಂದು ಕಮಿಷನರ್‌ ಸ್ಪಷ್ಟಪಡಿಸಿದ್ದಾರೆ. 

ಈ ಘಟನೆ ನಡೆದ ಸ್ಥಳದಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.