ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ವಕೀಲರೊಂದಿಗೆ
ಪ್ರಜಾವಾಣಿ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನನ್ನು ಹೇಳಿಕೆ ದಾಖಲಿಸಲು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ಹಾಜರುಪಡಿಸಿದರು.
ಪ‍್ರಕರಣದ ಕುರಿತಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 183ರ ಅಡಿ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಲಿದ್ದಾನೆ. ಆತನನ್ನು ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತರಲಾಗಿದೆ.
ಈ ಪ್ರಕರಣ ಸಂಬಂಧ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದ ಸಂದರ್ಭದಲ್ಲಿ ಸಾಕ್ಷಿ ದೂರುದಾರ, ‘ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದ ಅವಶೇಷವಿದು’ ಎಂದು ಹೇಳಿ ತಲೆಬುರುಡೆಯನ್ನೂ ಒಪ್ಪಿಸಿದ್ದ. ಆದರೆ, ವಿಚಾರಣೆ ವೇಳೆ, ತಲೆಬುರುಡೆಯನ್ನು ಹೊರತೆಗೆದ ಜಾಗ ತೋರಿಸಲು ಹಿಂದೇಟು ಹಾಕಿದ್ದ. ಬಳಿಕ, 'ಅದನ್ನು ನೆಲದಿಂದ ಹೊರತೆಗೆದದ್ದು ನಾನಲ್ಲ' ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹೇಳಿಕೆ ನೀಡಿದ್ದ. ಹಾಗಾಗಿ ಎಸ್‌ಐಟಿಯವರು ಆತನನ್ನು ಬಂಧಿಸಿ ಆ. 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಕ್ಷಿ ದೂರುದಾರನ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಸೆ.23 ರಂದು ಆರಂಭವಾಗಿದೆ. ಅದಿನ್ನೂ ಪೂರ್ಣಗೊಂಡಿಲ್ಲ. ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇಂದು ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.