ADVERTISEMENT

ಬಹುಭಾಷೆಗಳಲ್ಲಿ ‘ಬಿರ್ದ್‌ದ ಕಂಬುಲ’

ಕಂಬಳ ಕುರಿತ ತುಳು ಸಿನಿಮಾ ಬಗ್ಗೆ ಮಾಹಿತಿ ನೀಡಿದ ಎಸ್.ವಿ. ಬಾಬು ರಾಜೇಂದ್ರ ಸಿಂಗ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 16:20 IST
Last Updated 10 ಆಗಸ್ಟ್ 2021, 16:20 IST
‘ಬಿರ್ದ್‌ದ ಕಂಬುಲ’ (ವೀರ ಕಂಬಳ) ಸಿನಿಮಾ ಕುರಿತು ಮಂಗಳೂರಿನಲ್ಲಿ ಮಂಗಳವಾರ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ಮಾಹಿತಿ ನೀಡಿದರು. ಗುಣಪಾಲ ಕಡಂಬ, ಅರುಣ್‌ ತೋಡಾರ್, ವಿಜಯಕುಮಾರ್ ಕೊಡಿಯಾಲ್‌ಬೈಲ್ ಇದ್ದರು
‘ಬಿರ್ದ್‌ದ ಕಂಬುಲ’ (ವೀರ ಕಂಬಳ) ಸಿನಿಮಾ ಕುರಿತು ಮಂಗಳೂರಿನಲ್ಲಿ ಮಂಗಳವಾರ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ಮಾಹಿತಿ ನೀಡಿದರು. ಗುಣಪಾಲ ಕಡಂಬ, ಅರುಣ್‌ ತೋಡಾರ್, ವಿಜಯಕುಮಾರ್ ಕೊಡಿಯಾಲ್‌ಬೈಲ್ ಇದ್ದರು   

ಮಂಗಳೂರು: ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ತುಳುನಾಡಿನ ಸಂಸ್ಕೃತಿಯನ್ನು ಆಧರಿಸಿದ ‘ಬಿರ್ದ್ ದ ಕಂಬುಲ’ (ವೀರ ಕಂಬಳ) ಸಿನಿಮಾ ಶೀಘ್ರವೇ ಸೆಟ್ಟೇರಲಿದೆ.

ಈ ಕುರಿತು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೀರ್ಷಿಕೆಯನ್ನು ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಚಿವ ಅಂಗಾರ ಬಿಡುಗಡೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದ ಚಲನಚಿತ್ರವನ್ನು ತುಳುನಾಡಿನ ಕಂಬಳದ ಬಗ್ಗೆ ನಿರ್ಮಿಸುವ ಗುರಿ ಹೊಂದಿದ್ದೇನೆ. ಈ ಚಲನಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್ಬಿಂಗ್ ಮಾಡುವ ಉದ್ದೇಶ ಇದೆ. ಬಳಿಕ ಇಂಗ್ಲಿಷ್‌ನಲ್ಲೂ ಬಿಡುಗಡೆ ಮಾಡಲಾಗುವುದು’ ಎಂದು ವಿವರಿಸಿದರು.

‘ಮಂಗಳೂರು ನಗರ ‘ಸಿನಿಮಾ ನಗರಿ’ ಮಾಡುವುದಕ್ಕೆ ಸೂಕ್ತವಾದ ಪ್ರದೇಶ. ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕಂಬಳವು ರಾಷ್ಟ್ರೀಯ ಮನ್ನಣೆ ಪಡೆಯಬೇಕಾದರೆ ಸಿನಿಮಾ ಮಾಧ್ಯಮದ ಮೂಲಕವೂ ಈ ರೀತಿಯ ಒಂದು ಪ್ರಯತ್ನ ನಡೆಯಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ವಿವಿಧ ಭಾಷೆಗಳಲ್ಲಿ ಸುಮಾರು 97ಕ್ಕೂ ಹೆಚ್ಚು ಚಲನಚಿತ್ರ ಮಾಡಿರುವ ಬಾಬು ರಾಜೇಂದ್ರ ಸಿಂಗ್ ತುಳುವಿನಲ್ಲಿ ಪ್ರಥಮ ಬಾರಿಗೆ ಚಲನಚಿತ್ರ ಮಾಡುತ್ತಿದ್ದಾರೆ. ಕಂಬಳದ ಬಗ್ಗೆ ಅವರು ಈಗಾಗಲೇ ತಜ್ಞರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರಲ್ಲಿ ಹಿಂಸೆ ಇರುವುದಿಲ್ಲ. ಇಲ್ಲಿನ ಸಾಂಸ್ಕೃತಿಕ ಮಹತ್ವಗಳು ಇರುತ್ತವೆ’ ಎಂದು ಚಿತ್ರದ ಸಂಭಾಷಣೆ ಗಾರ, ತುಳು ರಂಗಭೂಮಿ ಹಾಗೂ ಚಲನ ಚಿತ್ರದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಹೇಳಿದರು.

‘ಕಂಬಳದ ಬಗ್ಗೆ ಸಮಗ್ರ ಮಾಹಿತಿ ಮಹತ್ವವನ್ನು ತಿಳಿಯಪಡಿಸುವ ಕೊರತೆ ಇದೆ. ಆ ದೃಷ್ಟಿಯಿಂದ ‘ಬಿರ್ದ್‌ದ ಕಂಬುಲ’ ಒಂದು ಮಹತ್ವದ ಹೆಜ್ಜೆಯಾಗಿದೆ’ ಎಂದು ಕಂಬಳ ಅಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ ತಿಳಿಸಿದರು. ಚಲನಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.