ADVERTISEMENT

ಕಾಂಗ್ರೆಸ್ ನೀತಿ | ದಕ್ಷಿಣ ಕನ್ನಡ ಜಿಲ್ಲೆ ಹಗಲಿನಲ್ಲೇ ಸ್ತಬ್ದ: ಕುಂಪಲ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 9:17 IST
Last Updated 14 ಜುಲೈ 2025, 9:17 IST
   

ಮಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾತ್ರಿ 8 ಗಂಟೆಗೆ ಮಂಗಳೂರು ನಗರ ಸ್ತಬ್ದ ಆಗುತ್ತದೆ ಎಂದಿದ್ದರು. ಈಗ ಕಾಂಗ್ರೆಸ್ ಸರ್ಕಾರದ ನೀತಿಯಿಂದಾಗಿ ಕಾರ್ಮಿಕರಿಗೆ ಕೆಲಸ ಇಲ್ಲದೆ ಹಗಲಿನಲ್ಲೇ ಸ್ತಬ್ದವಾಗುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು‌ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ದಕ್ಷಿಣ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ನೀತಿಯಿಂದಾಗಿ ಜಿಲ್ಲೆಯ ಕಾರ್ಮಿರಕು ಬೀದಿಗಿಳಿಯುವ ಸ್ಥಿತಿ ಎದುರಾಗಿದೆ.‌ ದಕ್ಷಿಣ ಕನ್ನಡ ಜಿಲ್ಲೆ ಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಬದಲಾವಣೆ ಗಲಾಟೆ ಹೊರತು ಅಭಿವೃದ್ಧಿ ಬಗ್ಗೆ ಯೋಚಿಸುತ್ತಿಲ್ಲ. ಕಾಂಗ್ರೆಸ್ ಎರಡು ಗುಂಪುಗಳು ನಡುವಿನ ತಿಕ್ಕಾಟದಿಂದ ಜಿಲ್ಲೆ ಬಡವಾಗಿದೆ. ಯು.ಟಿ. ಖಾದರ್ ವಿಧಾನಸಭೆ ಸ್ಪೀಕರ್ ಆದರೂ ರಾಜಕಾರಣ ಬಿಟ್ಟಿಲ್ಲ. ರಮಾನಾಥ ರೈ ಇನ್ನೊಂದು ಗುಂಪು ಕಟ್ಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಗೆ ಒಂದು ಮರಳು ನೀತಿ ಮಾಡದೆ ಜನರನ್ನು ಮರುಳು ಮಾಡಲಾಗುತ್ತಿದೆ ಎಂದರು.

ADVERTISEMENT

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪಕ್ಕದ ಕೇರಳ ರಾಜ್ಯದಲ್ಲಿ ಕಡಿಮೆ ದರಕ್ಕೆ ಕೆಂಪುಕಲ್ಲು ಸಿಗುತ್ತದೆ. ಆದರೆ‌ ದಕ್ಷಿಣ ಕನ್ನಡದಲ್ಲಿ ಸಿಗುವುದಿಲ್ಲ‌ . ಇದರ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇದೆ ಎಂದರು.

ಜಿಲ್ಲೆಗೆ ಅಧಿಕಾರಿಗಳು ಕೋಟ್ಯಂತರ ರೂಪಾಯಿಗೆ ಹರಾಜು ಆಗುತ್ತಿದ್ದಾರೆ‌. ಜನರು, ಜನ ಪ್ರತಿ ನಿಧಿಗಳು ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.