ಕಾಸರಗೋಡು: ಸೌಲಭ್ಯಗಳನ್ನು ಕಸಿಯುವ ಹುನ್ನಾರದಲ್ಲಿ ಗಡಿನಾಡ ಕನ್ನಡಿಗರ ಮೇಲೆ ಇನ್ನೊಂದು ಭಾಷೆಯ ಬಲವಂತ ಹೇರಿಕೆ ಸಲ್ಲದು ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಪ್ರತಿಷ್ಠಾನ, ಕೇರಳ ತುಳು ಅಕಾಡೆಮಿ ಜಂಟಿ ವತಿಯಿಂದ ಬುಧವಾರ ಹೊಸಂಗಡಿ ದುರ್ಗಿಪಳ್ಳದ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ನಡೆದ ಪುವೆಂಪು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೆಯಾಳಂ ಕಲಿಕೆ ಕಡ್ಡಾಯ ವಿಧೇಯಕ ಮಂಜೂರು ಮಾಡಿರುವ ರಾಜ್ಯಸರ್ಕಾರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಅನನ್ಯ ಸಾಧನೆಗಳನ್ನು ನಡೆಸಿದ ಪುವೆಂಪು ಅವರು ವಿವಿಧ ಭಾಷೆಗಳಲ್ಲಿ ಪರಿಣತರಾಗಿದ್ದು, ಅವರು ಸೌಹಾರ್ದತೆಯ ಕೊಂಡಿಯಾಗಿದ್ದರು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಮಾತನಾಡಿ, ಕುವೆಂಪು ಮತ್ತು ಪುವೆಂಪು ಏಕಸಮಾನರು. ಸಾಧನೆಗಳ ಮೂಲಕ ಇಬ್ಬರೂ ದೇಶಕ್ಕೆ ಮಾದರಿಯಾದವರು ಎಂದರು.
ಸಾಹಿತಿ ಪ್ರೊ.ಜಿ.ಎಸ್.ಸಿದ್ದರಾಮಯ್ಯ ಅವರಿಗೆ ಪುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಮೀನಾಕ್ಷಿ ರಾಮಚಂದ್ರ, ವರ್ಕಾಡಿ ಇಗರ್ಜಿಯ ರೆ.ಫಾ.ಬಾಸಿಲ್ ವಾಝ್, ಶಾಸಕ ಎ.ಕೆ.ಎಂ.ಅಶ್ರಫ್, ಗಣ್ಯರಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಭರತ್ ಮುಂಡೋಡಿ, ಉಮೇಶ್ ಎಂ.ಸಾಲ್ಯಾನ್, ಟಿ.ಶಂಕರನಾರಾಯಣ ಭಟ್, ಅಖಿಲೇಶ್ ನಗುಮುಗಂ, ಅರಿಬೈಲು ಗೋಪಾಲ ಶೆಟ್ಟಿ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇತರರು ಇದ್ದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಅಂಗವಾಗಿ ಚತುರ್ಭಾಷಾ ಕಾವ್ಯ ಸಂವಾದ ನಡೆಯಿತು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮನ್ವಯಕಾರರಾಗಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.