ADVERTISEMENT

ಕರಪತ್ರ, ಪೋಸ್ಟರ್ ತಯಾರಿಸಿ ಪ್ರಾಧ್ಯಾಪಕಿಗೆ ಕಿರುಕುಳ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 7:01 IST
Last Updated 20 ಏಪ್ರಿಲ್ 2022, 7:01 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಮಾನಹಾನಿಕರ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿನ ತಾಲ್ಲೂಕಿನ ಪ್ರಕಾಶ್ ಶೆಣೈ, ಬಂಟ್ವಾಳದ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ತಾರಾನಾಥ ಬಿ.ಎಸ್. ಶೆಟ್ಟಿ ಬಂಧಿತರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಾಲೇಜೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವಿನ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ಗಲಾಟೆಯಲ್ಲಿ ಕಾಲೇಜಿನ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿಕರವಾದ ಪತ್ರ ಹಂಚಲಾಗಿತ್ತು.

ADVERTISEMENT

ಪ್ರಾರಂಭದಲ್ಲಿ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಬರಹವನ್ನು ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದರು. ಇದಾದ ನಂತರ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ನಿಲ್ದಾಣಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಪ್ರಾದ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ವಿರುದ್ಧ 2019ರಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.