ADVERTISEMENT

ವಾರಕ್ಕೊಮ್ಮೆ ಭೇಟಿ ಪಿಕ್‍ನಿಕ್ ಅಲ್ಲದೆ ಮತ್ತೆನು?: ಡಿ.ಬಸವರಾಜ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:56 IST
Last Updated 3 ಜೂನ್ 2021, 4:56 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನ ಸಾಲು ಸಾಲಾಗಿ ಕೊರೊನಾ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕಾಗಿದ್ದ ಉಸ್ತುವಾರಿ ಸಚಿವ ಬೈರತಿ ಬಸವರಾಜ ವಾರಕ್ಕೊಮ್ಮೆ ಭೇಟಿ ನೀಡುತ್ತಿರುವುದು ಪಿಕ್‍ನಿಕ್ ಅಲ್ಲದೇ ಮತ್ತೇನು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್‍ ಪ್ರಶ್ನಿಸಿದ್ದಾರೆ.

ಸಚಿವರು ಜಿಲ್ಲೆಯ ಅಭಿವೃದ್ಧಿ, ಆಡಳಿತದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಉಸ್ತುವಾರಿ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ 15 ದಿನಗಳ ಕಾಲ ವಾಸ್ತವ್ಯ ಮಾಡಿ ಕೊರೊನಾ ಉಲ್ಬಣಿಸದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿಯೇ ಆದೇಶಿಸಿದ್ದರೂ ಸಚಿವರು ಕವಡೆ ಕಾಸಿನ ಕಿಮ್ಮತ್ತುಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಾಮಾನ್ಯ ಬೆಡ್‍, ಆಮ್ಲಜನಕ ಬೆಡ್‍, ವೆಂಟಿಲೆಟರ್ ಬೆಡ್‍ಗಾಗಿ ಜನರು ಕಣ್ಣೀರಿಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಆದರೆ ಜಿಲ್ಲಾಡಳಿತ ಸಾವಿನ ಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಸುಳ್ಳು ಲೆಕ್ಕ ನೀಡುತ್ತಿದೆ. ಲಸಿಕೆ ಸಿಗುತ್ತಿಲ್ಲ. ಇಂತಹ ಸತ್ಯ ಸಂಗತಿಗಳನ್ನು ಅರಿಯಬೇಕಾದರೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

20 ವರ್ಷಗಳಲ್ಲಿ ನನ್ನಷ್ಟು ಯಾರು ಜಿಲ್ಲೆಯಲ್ಲಿ ಭೇಟಿ ಮಾಡಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನು ಸಹ ಮಾಡಿಲ್ಲ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. 1999ರಿಂದ 2004ರ ವರೆಗೆ ಮತ್ತು 2013ರಿಂದ 2018ರವರೆಗೆ ಜಿಲ್ಲೆ ಅಭಿವೃದ್ಧಿ ಕಂಡಿತು. ಅದಕ್ಕೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎಸ್‌. ಮಲ್ಲಿಕಾರ್ಜುನ ಕಾರಣ. ಸಚಿವರಿಗೆ ಜಿಲ್ಲೆಯ ಇತಿಹಾಸ ತಿಳಿದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.