ಸಾಂದರ್ಭಿಕ ಚಿತ್ರ
ಮಂಗಳೂರು: ಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪನಿಗೆ ₹48.84 ಲಕ್ಷ ವಂಚನೆ ನಡೆಸಿದ ಆರೋಪದ ಮೇಲೆ ಅದೇ ಕಂಪನಿಯ ಅಕೌಂಟೆಂಟ್ ಪುಷ್ಪಲತಾ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಕಂಪನಿಯ ಆರ್ಥಿಕ ವ್ಯವಹಾರವನ್ನು ಅಕೌಂಟೆಂಟ್ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಕಂಪನಿಯ ಮಾಲೀಕರು ಆ. 23 ರಂದು ದೇರೆಬೈಲಿನಲ್ಲಿರುವ ಕಂಪನಿಯ ಕಚೇರಿಗೆ ಲೆಕ್ಕಪರಿಶೋಧಕರನ್ನು ಕರೆಸಿ, ನಾಲ್ಕು ಕಂಪನಿಗಳ ಜೊತೆ ನಡೆಸಿದ್ದ ದೈನಂದಿನ ಹಣಕಾಸು ವ್ಯವಹಾರ ಹಾಗೂ ಜಿ.ಎಸ್.ಟಿಯ ಹಣ ಪಾವತಿಯ ದಾಖಲಾತಿಗಳನ್ನು ಲೆಕ್ಕಪರಿಶೋಧಕರು ಪರಿಶೀಲನೆಗೆ ಒಳಪಡಿಸಿದ್ದರು. ಕಂಪನಿಯ ಹಣಕಾಸು ವ್ಯವಹಾರದಲ್ಲಿ ಲೋಪ ನಡೆದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಮಾಲೀಕರು ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಆರೋಪಿ ಪುಷ್ಪಲತಾ ಅವರು ಟ್ರೇಡಿಂಗ್ ಕಂಪನಿಗಳಲ್ಲಿ ಸ್ವೀಕೃತವಾದ ಹಣದಲ್ಲಿ ಜಿ.ಎಸ್.ಟಿ ಕಟ್ಟಬೇಕಾದ ಹಣವನ್ನು 2024ರ ಜ. 11ರಿಂದ ಆ.20ರವರೆಗೆ, ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿರುವ ಕಂಪನಿಯ ಖಾತೆಗೆ ಹಂತ ಹಂತವಾಗಿ ವರ್ಗಾಯಿಸಿದ್ದರು. ಅಲ್ಲಿಂದ ಆಕ್ಸಿಸ್ ಬ್ಯಾಂಕಿನಲ್ಲಿರುವ ಕಂಪನಿಯ ಇನ್ನೊಂದು ಖಾತೆಗೆ ಈ ಹಣವನ್ನು ವರ್ಗಾಯಿಸಿದ್ದರು. ಆ ಖಾತೆಯಿಂದ ಪುಷ್ಪಲತಾ ಅವರು ತಮ್ಮ ಖಾತೆಗೆ ಹಾಗೂ ಪರಿಚಯದ ರಿತೇಶ್ ಎಂಬಾತ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಆರೋಪಿ ಒಟ್ಟು ₹48.84 ಲಕ್ಷವನ್ನು ವಂಚಿಸಿದ್ದು, ಆಕೆ ವಿರುದ್ಧ ಕ್ರಮಕೈಗೊಳ್ಳುವಂತೆ ಕಂಪನಿ ಮಾಲಿಕರು ಒತ್ತಾಯಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.