ADVERTISEMENT

ಮಂಗಳೂರು: ಗೋ ಹತ್ಯೆ ಆರೋಪಿ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಅಡಿ ಚಾರ್ಜ್‌ಶೀಟ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 13:18 IST
Last Updated 11 ಸೆಪ್ಟೆಂಬರ್ 2025, 13:18 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಮಂಗಳೂರು: ಜಾನುವಾರು ಕಳ್ಳತನ ಮತ್ತು ಜಾನುವಾರು ಹತ್ಯೆ ಕೃತ್ಯಗಳಲ್ಲಿ ಪದೇ ಪದೇ ತೊಡಗಿಸಿಕೊಂಡ ಆರೋಪಿ ಕುದ್ರೋಳಿ ಫೈಜಲ್, ಅಲಿಯಾಸ್‌ ಮಂಡಿ ಫೈಜಲ್, ಅಲಿಯಾಸ್‌ ಪಾಚ್ ಎಂಬಾತನ ವಿರುದ್ಧ ಇಲ್ಲಿನ ಪೊಲೀಸರು 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಸಂಘಟಿತ ಅಪರಾಧ ತಡೆಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಸೇರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ADVERTISEMENT

ಮೂಡುಬಿದಿರೆ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಡಗ ಎಡಪದವು ಎಂಬಲ್ಲಿ ಬೊಲೆರೊ ವಾಹನದಲ್ಲಿ ದನದ ಮಾಂಸವನ್ನು ಸಾಗಿಸುತ್ತಿದ್ದ ಆರೋಪಿಗಳಾದ ಮೊಹಮ್ಮದ್ ಆರಿಫ್ (ಚಾಲಕ) ಹಾಗೂ ಮೊಹಮ್ಮದ್ ಸುಲ್ತಾನ್‌ನನ್ನು ಬಜಪೆ ಠಾಣೆಯ ಪೊಲೀಸರು 2024ರ ಜುಲೈ 28ರಂದು ಬಂಧಿಸಿದ್ದರು. ಆ ದನದ ಮಾಂಸವನ್ನು ಕುದ್ರೋಳಿ ಮಂಡಿಯ ಫೈಜಲ್‌ಗೆ ನೀಡಲು ಒಯ್ಯುತ್ತಿದ್ದುದಾಗಿ ಆರೋಪಿಗಳು ತಿಳಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಫೈಜಲ್ ಸೇರಿದಂತೆ ಐವರ ವಿರುದ್ಧ 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿತ್ತು.

‘ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಆರೋಪಿ ಕುದ್ರೋಳಿ ಫೈಝಲ್ ತನ್ನ ಸಹಚರರೊಂದಿಗೆ ಸೇರಿಕೊಂಡು ಜಾನುವಾರು ಕಳ್ಳತನ ಮತ್ತು ಜಾನುವಾರು ಹತ್ಯೆಯಂತಹ ಕೃತ್ಯಗಳಲ್ಲಿ ಪದೇ ಪದೇ ತೊಡಗಿರುವುದು ಕಂಡು ಬಂದಿತ್ತು. ಆತ ಅದಕ್ಕೂ ಮುನ್ನ ಇಂತಹ ಎರಡಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವುದು ದೃಢಪಟ್ಟಿತ್ತು. ಹಾಗಾಗಿ ಆತನ ವಿರುದ್ಧ 2020ರ ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 111 (ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು) ಅನ್ನು ಸೇರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸಂಘಟಿತ ಅಪರಾಧ ಕೃತ್ಯಗಳನ್ನು ಎಸಗುವ, ಒಳಸಂಚಿನಲ್ಲಿ ಭಾಗಿಯಾಗುವ, ದುಷ್ಪ್ರೇರಣೆ ನೀಡುವ ಅಥವಾ ಸಂಘಟಿತ ಅಪರಾಧ ಕೃತ್ಯಗಳಲ್ಲಿ ಯಾವುದೇ ಅಪರಾಧ ಕೂಟದ ಸದಸ್ಯನಾಗಿರುವ ಆರೋಪ ಸಾಬೀತಾದರೆ ಅಂತಹ ಅಪರಾಧಿಗಳಿಗೆ ಬಿಎನ್ಎಸ್ ಸೆಕ್ಷನ್ 111ರ ಅನ್ವಯ 5 ವರ್ಷಗಳಿಗಿಂತ ಕಡಿಮೆಯಿಲ್ಲದ, ಜೀವಾವಧಿವರೆಗೂ ಕಾರಾಗೃಹವಾಸ ವಿಧಿಸಬಹುದಾದ ಶಿಕ್ಷೆ ಮತ್ತು₹ 5 ಲಕ್ಷಗಳವರೆಗೆ ದಂಡ ವಿಧಿಸುವುದಕ್ಕೆ ಅವಕಾಶವಿರುತ್ತದೆ ಎಂದು ಕಮಿಷನರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.