ADVERTISEMENT

ಬಂಧಿತ ಕಥೋಲಿಕ್‌ ಸನ್ಯಾಸಿನಿಯರನ್ನು ಬಿಡುಗಡೆ ಮಾಡಿ: ಜೆ.ಆರ್‌.ಲೋಬೊ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:07 IST
Last Updated 2 ಆಗಸ್ಟ್ 2025, 7:07 IST
ಜೆ ಆರ್ ಲೋಬೊ
ಜೆ ಆರ್ ಲೋಬೊ    

ಮಂಗಳೂರು: ‘ಛತ್ತೀಸಗಢದಲ್ಲಿ ಬಂಧಿತರಾಗಿರುವ ಕೇರಳದ ಇಬ್ಬರು ಕಥೋಲಿಕ್‌ ಸನ್ಯಾಸಿನಿಯರು ಮುಗ್ದರು. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಜೆ.ಆರ್‌. ಲೋಬೊ ಆಗ್ರಹಿಸಿದರು.

‘ಮಾನವ ಕಳ್ಳಸಾಗಣೆ ಮತ್ತು ಮತಾಂತರದ ಆರೋಪ ಅವರ ಮೇಲೆ ಹೊರಿಸಲಾಗಿದೆ. ಈ ಸನ್ಯಾಸಿನಿಯರ ಜೊತೆಗಿದ್ದ ಮಹಿಳೆಯರು ದೂರು ನೀಡಿಲ್ಲ. ಆದರೂ, ಅಲ್ಲಿಯ ಬಜರಂಗದಳದವರು ನೀಡಿದ ದೂರು ಆಧರಿಸಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕ್ರೈಸ್ತರು ಮತಾಂತರ ಮಾಡಿಸುತ್ತಾರೆ ಎಂಬುದು ಸುಳ್ಳು ಆರೋಪ. ಹಾಗೆ ಆಗಬೇಕಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಶೇ 90ರಷ್ಟು ಜನ ಕ್ರೈಸ್ತರು ಇರಬೇಕಿತ್ತು. ಒಂದು ಕಾಲದಲ್ಲಿ ಇಲ್ಲಿಯ  ಶಿಕ್ಷಣ ಸಂಸ್ಥೆಗಳೆಲ್ಲವೂ ಕ್ರೈಸ್ತರದ್ದಾಗಿದ್ದವು. ಹಲವಾರು ಆಸ್ಪತ್ರೆಗಳನ್ನು ಅವರು ನಡೆಸುತ್ತಿದ್ದಾರೆ. ಇಲ್ಲಿ ಎಷ್ಟು ಮಂದಿಯನ್ನು ಮತಾಂತರ ಮಾಡಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಹಿಂದೆ ಬಿಹಾರದಲ್ಲಿ ಕ್ರೈಸ್ತ ಧರ್ಮಗುರುವಿನ ಹತ್ಯೆಯಾಗಿತ್ತು. ಈಗ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ನಮ್ಮ ಪ್ರಧಾನಿ ಅಲ್ಲಿಗೆ ಭೇಟಿ ನೀಡಿಲ್ಲ. ಅಲ್ಪಸಂಖ್ಯಾತರ ವಿಷಯದಲ್ಲಿ ಬಿಜೆಪಿಯದ್ದು ಇಬ್ಬಗೆಯ ನೀತಿ’ ಎಂದು ಟೀಕಿಸಿದ ಅವರು, ಈ ರೀತಿಯ ದೌಜ್ಯನ್ಯ ಎಲ್ಲಿಯೂ ಆಗಬಾರದು ಎಂದರು.  

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಮಾತನಾಡಿ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಕ್ರೈಸ್ತ ಸನ್ಯಾಸಿನಿಯರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. 

ಪ್ರಮುಖರಾದ ಸಾಹುಲ್ ಹಮೀದ್, ಶಾಲೆಟ್ ಪಿಂಟೋ, ಎಸ್.ಅಪ್ಪಿ, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ಜಾನ್ ಮೊಂತೆರೊ, ಅಲ್ವಿನ್ ಪ್ರಕಾಶ್, ನೆಲ್ಸನ್ ಮೊಂತೆರೊ, ಪ್ರೇಮ್ ನಾಥ್, ಉದಯ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೆ. ಹರೀಶ್ ಕುಮಾರ್
ಕೇರಳದ ಕ್ರೈಸ್ತ ಸನ್ಯಾಸಿನಿಯರ ಬಂಧನ ವಿರೋಧಿಸಿ ಬಿಡುಗಡೆ ಆಗ್ರಹಿಸಿ ನಡೆಯುವ ಪ್ರತಿಭಟನೆಗೆ ಕಾಂಗ್ರೆಸ್‌ ಪಕ್ಷ ಬೆಂಬಲ ನೀಡಲಿದೆ.
–ಜೆ.ಆರ್‌. ಲೋಬೊ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ
ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಗೋಮಾಂಸ ರಫ್ತು ಮಾಡುವವರೆಲ್ಲರೂ ಹಿಂದೂಗಳು. ಆದರೂ ಬಿಜೆಪಿಯವರು ಅಲ್ಪಸಂಖ್ಯಾತರನ್ನು ದೂರುತ್ತಿದ್ದಾರೆ.
- ಕೆ. ಹರೀಶ್‌ಕುಮಾರ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.