ADVERTISEMENT

ಮಂಗಳೂರು: ವಾಗ್ವಾದ- ಪೊಲೀಸರ ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 3:13 IST
Last Updated 27 ಆಗಸ್ಟ್ 2021, 3:13 IST

ಮಂಗಳೂರು: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳ ನಡುವೆ ಗುರುವಾರ ರಾತ್ರಿ ವಾಗ್ವಾದ ನಡೆದಿದ್ದು, ಈ ವೇಳೆ ಕಾವೂರು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು.

ನಗರದ ಕಾವೂರು ಜಂಕ್ಷನ್ ಸಮೀಪದ ದೈವಸ್ಥಾನದ ಬಳಿ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಈ ಮಧ್ಯೆ, ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು, ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.

ಎರಡೂ ಗುಂಪುಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಮಧ್ಯೆ ಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಗುಂಪುಗೂಡಿದ್ದ ತಂಡಗಳು ಚದುರಿದವು. ಎರಡೂ ತಂಡಗಳ ಯುವಕರು ಕಾವೂರು ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ನಕಲಿ ದಾಖಲೆ ನೀಡಿ ಸಾಲ: ವಂಚನೆ

ವಾಹನ ಖರೀದಿಸಲು ನಗರದ ಕಥೊಲಿಕ್‌ ಬ್ಯಾಂಕ್‌ಗೆ ನಕಲಿ ದಾಖಲೆಗಳನ್ನು ನೀಡಿ ₹13 ಲಕ್ಷ ಸಾಲ ಪಡೆದಿದ್ದು, ಮರು ಪಾವತಿಸದೇ ವಂಚಿಸಿರುವ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2019ರಲ್ಲಿ ಬ್ಯಾಂಕಿನ ಕಂಕನಾಡಿ ಕಚೇರಿಯಲ್ಲಿ ಮುಹಮ್ಮದ್ ಮುಸ್ತಫಾ, ಕಾರು ಖರೀದಿಸಲು ₹13 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ಲತೀಫ್ ಹಾಗೂ ಜೈನಾಬಿ ಅವರನ್ನು ಜಾಮೀನುದಾರರನ್ನಾಗಿ ನಮೂದಿಸಿ, ಬ್ಯಾಂಕಿನಿಂದ ಸಾಲ ಪಡೆದಿದ್ದರು.

ಕಾರು ವಿತರಕ ಸಂಸ್ಥೆಯ ನಿರ್ದೇಶಕ ಅಬ್ದುಲ್ ಅಝೀಝ ಹಾಗೂ ಇರ್ಫಾನ್ ಖಾದರ್ ಅವರಿಂದ ಕಾರು ಖರೀದಿ ಮಾಡಿದ ಬಗ್ಗೆ ಬ್ಯಾಂಕಿಗೆ ದಾಖಲೆ ನೀಡಿದ್ದರು. 2020ರಲ್ಲಿ ಕಾರು ವಿತರಕ ಸಂಸ್ಥೆ ಬಂದ್ ಆಗಿದೆ. ಮುಹಮ್ಮದ್ ಇಕ್ಬಾಲ್ ಹಾಗೂ ಆದಂ ಎಂಬವರು ಸಾಲ ಪಡೆಯಲು ಸಹಕರಿಸಿದ್ದರು. ಬ್ಯಾಂಕಿಗೆ ನೀಡಿದ ದಾಖಲಾತಿಗಳು ಕೂಡ ನಕಲಿಯಾಗಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌ ಕಳವು

ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ.

ಆ.2 ರಂದು ಬೆಳಿಗ್ಗೆ 9.30ರಿಂದ 10.30ರ ಅವಧಿಯಲ್ಲಿ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿರುವ 202ನೇ ಮನೆಯ ಬಾಗಿಲಿನ ಚಿಲಕವನ್ನು ತೆಗೆದು ಒಳ ಪ್ರವೇಶಿಸಿದ್ದಾರೆ. ಮನೆಯ ಹಾಲ್‌ನಲ್ಲಿ ಟೇಬಲ್ ಮೇಲೆ ಇರಿಸಿದ್ದ ಲೆನೊವೊ ಕಂಪನಿಯ ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ. ಲ್ಯಾಪ್‌ಟಾಪ್ ಮೌಲ್ಯ ₹25 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.