ADVERTISEMENT

‘ಕಾಲೇಜು ಆವರಣದಲ್ಲಿ ಸ್ಕಾರ್ಫ್‌ಗೆ ಅವಕಾಶವಿಲ್ಲ’

ಸೇಂಟ್‌ ಆಗ್ನೆಸ್‌ ಕಾಲೇಜು ಪ್ರಾಂಶುಪಾಲರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 9:25 IST
Last Updated 29 ಜೂನ್ 2018, 9:25 IST

ಮಂಗಳೂರು: ಸೇಂಟ್‌ ಆಗ್ನೆಸ್‌ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರವನ್ನು ಧರಿಸಬೇಕು. ಮತ್ತು ಅದಕ್ಕೆ ಹೊರತಾದ ಬೇರೆ ಯಾವುದೇ ಉಡುಗೆಯನ್ನು ಕಾಲೇಜಿನ ಆವರಣದಲ್ಲಿ ಧರಿಸಬಾರದು. ಕಾಲೇಜಿನ ಅವಧಿಯಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಫ್‌ ಧರಿಸುವುದಾಗಲೀ ಮುಖಮುಚ್ಚಿಕೊಳ್ಳುವುದಾಗಲೀ ಮಾಡುವಂತಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್‌ ಜೆಸ್ವಿನಾ ಹೇಳಿದ್ದಾರೆ.

ಶುಕ್ರವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಈ ನಿಯಮ ಮೂರು ವರ್ಷಗಳಿಂದ ಈ ನಿಯಮವನ್ನು ಕಾಲೇಜು ಕೈಪಿಡಿಯಲ್ಲಿ ದಾಖಲಿಸಲಾಗುತ್ತಿದೆ ಅಲ್ಲದೆಕಾಲೇಜಿಗೆ ಪ್ರವೇಶ ಪಡೆಯುವ ಮುನ್ನವೇ ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರಿಗೆ ಈ ವಿಷಯ ವಿವರಿಸಲಾಗಿದೆ. ಈ ನೀತಿ ನಿಯಮಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಿ ಮಾಡಿದ್ದಾರೆ’ ಎಂದು ಅವರು ವಿವರಿಸಿದರು.

ಕ್ರಿಶ್ಚಿಯನ್‌ ಭಗಿನಿಯರು ತಮ್ಮ ಜೀವನವನ್ನು ಧರ್ಮಕ್ಕೆ ಸಮರ್ಪಿಸಿಕೊಂಡವರಾದ್ದರಿಂದ ಅವರಿಗೆ ಸಮವಸ್ತ್ರದಲ್ಲಿ ವಿನಾಯಿತಿ ಇದೆ. ಎಲ್ಲ ಧರ್ಮದ ಇತರ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯಿಸುತ್ತಿದೆ. ಕಾಲೇಜಿನಲ್ಲಿ ಶೇ 28ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ ಸಂಸ್ಥೆ ಬಡ ವಿದ್ಯಾರ್ಥಿನಿಯರಿಗೆ ಶುಲ್ಕದಲ್ಲಿಯೂ ರಿಯಾಯಿತಿ ನೀಡುತ್ತಿದೆ. ಈ ವರ್ಷ 100 ವಿದ್ಯಾರ್ಥಿನಿಯರಿಗೆ ರಿಯಾಯಿತಿ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

ಜೂನ್‌ 25ರಂದು ಕಾಲೇಜಿನ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಫಾತಿಮಾ ಅವರ ತಂದ ಅನೀಸ್‌ ಅವರು ತಮ್ಮ ಮಗಳು ಕಾಲೇಜು ಪ್ರಾಂಶುಪಾಲರಿಗೆ ಬರೆದ ಕ್ಷಮಾಪಣಾ ಪತ್ರವನ್ನು ಓದಿದರು. ‘ನಮಾಜ್‌ ಕುರಿತು ಚರ್ಚಿಸಲು ಸ್ನೇಹಿತರು ಕಾಲೇಜಿನ ಗೇಟ್‌ ಬಳಿ ಕರೆದಿದ್ದು, ಅಲ್ಲಿ ಹೋದಾಗ ಇದ್ದಕ್ಕಿದ್ದಂತೆಯೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕ್ಯಾಂಪಸ್‌ಫ್ರಂಟ್‌ಆಫ್‌ ಇಂಡಿಯಾದ ಬಲವಂತದಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ನಾನು ಕಾಲೇಜಿನ ನಿಯಮಗಳಿಗೆ ಬದ್ಧಳಾಗಿದ್ದು, ಕಾಲೇಜು ನನ್ನ ಧರ್ಮವನ್ನು ಗೌರವದಿಂದ ಕಾಣುತ್ತಿದೆ. ಘಟನೆಯ ಕುರಿತು ಕ್ಷಮೆ ಕೇಳುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಪ್ರಾಂಶುಪಾಲರು, ಪೋಷಕರು ಮತ್ತು ವಿದ್ಯಾರ್ಥಿನಿಯರು ಕುಳಿತು ಮಾತನಾಡಬಹುದಾಗಿದ್ದ ವಿಚಾರವನ್ನು ಪ್ರತಿಭಟನೆಯ ವರೆಗೆ ಕೊಂಡೊಯ್ಯಬೇಕಾಗಿರಲಿಲ್ಲ. ಈ ಘಟನೆಯ ಬಗ್ಗೆ ವಿಷಾದವಿದೆ. ಆದರೆ ಈ ವಿಷಯವನ್ನು ಇಲ್ಲಿಗೇ ಕೈಬಿಟ್ಟುವಿದ್ಯಾರ್ಥಿನಿಯರು ಶಿಕ್ಷಣದತ್ತ ಗಮನ ಹರಿಸುವಂತೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿಲ್ಲ. ಅವರಿಗೆ ಮಾರ್ಗದರ್ಶನ ಮಾಡಲಾಗಿದ್ದು ಎಲ್ಲರೂ ಅಧ್ಯಯನದಲ್ಲಿ ತಲ್ಲೀನರಾಗಿದ್ದಾರೆ ಎಂದು ಸಿಸ್ಟರ್‌ ಜೆಸ್ವೀನಾ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ವೆನಿಸ್ಸಾ, ಚಾರ್ಲ್ಸ್‌ ಪಾಯ್ಸ್‌, ಡಾ. ದೇವಿಪ್ರಭಾ ಆಳ್ವ, ನೀನಾ, ಲ್ಯಾಡ್ಲಿನ್‌ ಜನೀಷಾ ಮೊಂತೇರೊ ಇದ್ದರು.

ಸ್ಕಾರ್ಫ್‌ ಮತ್ತು ನಮಾಜ್‌ ಕುರಿತಂತೆ ರಚಿಸಲಾದ ವಾಟ್ಸ್‌ಆಪ್‌ ಗ್ರೂಪ್‌ಗೆ ತನ್ನನ್ನು ಸೇರಿಸಿದ್ದು, ಈ ಕುರಿತು ಜಾಗೃತಿ ಮೂಡಿಸುವಂತೆ ಒತ್ತಾಯ ಮಾಡಲಾಗಿತ್ತು ಎಂದು ವಿದ್ಯಾರ್ಥಿನಿ ನೌರೀನ್‌ ಹೇಳಿದರು. ಆದರೆ ಈ ಗ್ರೂಪ್‌ನಿಂದ ಹೊರ ಬಂದ ತನಗೆ ಬೆದರಿಕೆಯ ಸಂದೇಶ ಬಂದಿತ್ತು. ಅಲ್ಲದೆ ಧರ್ಮಜಾಗೃತಿಯ ವಿಡಿಯೊ ತುಣುಕುಗಳನ್ನು ಕಳುಹಿಸಿ ಈ ಆಂದೋಲನದಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗಿತ್ತು ಎಂದು ಅವರು ವಿವರಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಆಗಿರುವ ನೌರೀನ್‌ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಫಾತಿಮಾ ಅವರಿಗೆ ಕಾಲೇಜು ಎಲ್ಲ ರೀತಿಯ ಬೆಂಬಲ ನೀಡುತ್ತದೆ ಎಂದು ಸಿಸ್ಟರ್‌ ಜೆಸ್ವಿನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.