ADVERTISEMENT

ಮಂಗಳೂರು: ಕಾಂಗ್ರೆಸ್ ಪ್ರತಿಭಟನೆ, ಐಟಿ ಕಚೇರಿ ಎದುರು ವಶಕ್ಕೆ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇ.ಡಿ ದುರ್ಬಳಕೆ, ರಾಹುಲ್ ಗಾಂಧಿಗೆ ಕಿರುಕಳ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 12:18 IST
Last Updated 17 ಜೂನ್ 2022, 12:18 IST
ಬ್ಯಾರಿಕೇಡ್ ಹತ್ತಿ ಮುನ್ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಅತ್ತಾವರದ ಐಟಿ ಕಚೇರಿ ಬಳಿ ಪೊಲೀಸರು ತಡೆದರು –ಪ್ರಜಾವಾಣಿ ಚಿತ್ರ
ಬ್ಯಾರಿಕೇಡ್ ಹತ್ತಿ ಮುನ್ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಅತ್ತಾವರದ ಐಟಿ ಕಚೇರಿ ಬಳಿ ಪೊಲೀಸರು ತಡೆದರು –ಪ್ರಜಾವಾಣಿ ಚಿತ್ರ   

ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೆಪಿಸಿಸಿ ಉಪಾಧ್ಯಕ್ಷರಾದ ರಮಾನಾಥ ರೈ ಮತ್ತು ಐವನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿ ಮಿಥನ್ ರೈ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡ ಜೆ.ಆರ್ ಲೋಬೊ ಮುಂತಾದವರ ನೇತೃತ್ವದಲ್ಲಿ ಫಲ್ನೀರ್‌ನ ಮಥಾಯಸ್ ಉದ್ಯಾನದಿಂದ ಅತ್ತಾವರದಲ್ಲಿರುವ ಐಟಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು.

‘ಸಂವಿಧಾನ ವಿರೋಧಿ ಬಿಜೆಪಿ ಡೌನ್ ಡೌನ್‌, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ...’ ಮುಂತಾದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಇ.ಡಿ ದಾಳಿಯನ್ನು ವಿರೋಧಿಸಿ ಘೋಷಣೆಗಳನ್ನು ಬರೆದುಕೊಂಡಿದ್ದ ಫಲಕಗಳನ್ನೂ ಕೈಯಲ್ಲಿ ಹಿಡಿದುಕೊಂಡಿದ್ದರು.

ADVERTISEMENT

ಐಟಿ ಕಚೇರಿ ಬಳಿಯ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬ್ಯಾರಿಕೇಡ್‌ಗಳನ್ನು ಹತ್ತಿ ಮುಖಂಡರು ಮುನ್ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಬಲಪ್ರಯೋಗ ಮಾಡಿ ತಡೆದರು. ಈ ಸಂದರ್ಭದಲ್ಲಿ ತಳ್ಳಾಟ–ನೂಕಾಟವಾಯಿತು. ನಂತರ ಎಲ್ಲರನ್ನೂ ವಶಕ್ಕೆ ಪಡೆದುಕೊಂಡು ವ್ಯಾನ್ ಮತ್ತು ಜೀಪ್‌ಗಳಲ್ಲಿ ಕರೆದುಕೊಂಡು ಹೋಗಿ ಕೆಲಕಾಲದ ನಂತರ ಬಿಡುಗಡೆ ಮಾಡಲಾಯಿತು.

‘ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬ’
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹರೀಶ್ ಕುಮಾರ್‌ ಅವರು ನೆಹರು ಕುಟುಂಬದವರು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಜೈಲಿಗೂ ಹೋಗಿದ್ದಾರೆ. ಅವರ ಮೇಲೆ ಸೇಡು ತೀರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೂರಿದರು.

‘ನ್ಯಾಷನಲ್ ಹೆರಾಲ್ಡ್‌ಗೆ ಸಂಬಧಿಸಿ ₹ 2 ಸಾವಿರ ಕೋಟಿ ಹಗರಣದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ನೆಹರು ಅವರು ಸ್ವಂತ ಮನೆಯನ್ನೇ ದೇಶಕ್ಕಾಗಿ ಕೊಟ್ಟಿದ್ದು ಅದರ ಬೆಲೆ ಈಗ ₹ 20 ಸಾವಿರ ಕೋಟಿಯಷ್ಟಾಗುತ್ತದೆ. ಹೀಗಿರುವಾಗ ಆ ಕುಟುಂಬಕ್ಕೆ ₹ 2 ಸಾವಿರ ಕೋಟಿ ಮೇಲೆ ಆಸೆ ಇರಲು ಸಾಧ್ಯವೇ’ ಎಂದು ಹರೀಶ್ ಕುಮಾರ್ ಪ್ರಶ್ನಸಿದರು.

ಪಾಲಿಕೆ ಸದಸ್ಯರಾದ ನವೀನ್ ಡಿ’ಸೋಜಾ, ಅಬ್ದುಲ್ ರವೂಫ್‌, ಪ್ರವೀಣ್‌ ಚಂದ್ರ ಆಳ್ವ, ಮುಖಂಡರಾದ ಲುಕ್ಮಾನ್‌, ಮಂಜುನಾಥ ಭಂಡಾರಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.