ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಲಾಲ್ ಬಾಗ್ ನ ಪಾಲಿಕೆ ಕಚೇರಿ ಎದುರು ರಸ್ತೆ ತಡೆ ನಡೆಸಿ, ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.
ರಾಜ್ಯಪಾಲರಿಗೆ ಘೆರಾವ್ ಹಾಕಿ ರಸ್ತೆ ತಡೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಬ್ರಹ್ಮಶ್ರಿ ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಪಾಲಿಕೆ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಪ್ರಕಾಶ್ ರಾಥೋಡ್, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಪದ್ಮರಾಜ ಅರ್.ಪೂಜಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಮಾತನಾಡಿದರು.
ನಾಯಕರು ಭಾಷಣ ಮಾಡುತ್ತಿರುವಾಗಲೇ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿದರು. ತಕ್ಷಣವೇ ಡಿಸಿಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ಪೊಲೀಸರು ಬೆಂಕಿಯನ್ನು ನಂದಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ 'ಔಟ್ ಔಟ್ ಗೆಹಲೋತ್' ಎಂದು ಘೋಷಣೆ ಕೂಗಿದರು. ರಸ್ತೆ ತಡೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಸ್ವಲ ಹೊತ್ತಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಿಂದಾಗಿ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ವ್ಯತ್ಯಯ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.