ADVERTISEMENT

ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದ್ಧ: ಮಂಜುನಾಥ ಭಂಡಾರಿ

ವಿಟ್ಲ: ಪ.ಪಂ. ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿದ ಮಂಜುನಾಥ ಭಂಡಾರಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:16 IST
Last Updated 24 ಡಿಸೆಂಬರ್ 2021, 2:16 IST
ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಣಾಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಗುರುವಾರ ಬಿಡುಗಡೆಗೊಳಿಸಿದರು
ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಣಾಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಗುರುವಾರ ಬಿಡುಗಡೆಗೊಳಿಸಿದರು   

ವಿಟ್ಲ: ‘ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸನ್ನದ್ಧವಾಗಿದೆ. ’ಪ್ರಜೆಗಳಿಂದ ಪ್ರಣಾಳಿಕೆ’ ಎಂಬ ವಿನೂತನ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮತದಾರರು ಏನನ್ನು ಬಯಸಿದ್ದಾರೋ ಅದೇ ರೀತಿ ಆಡಳಿತ ನೀಡುವ ಭರವಸೆಯನ್ನು ಪಕ್ಷ ನೀಡುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದರು.

ಗುರುವಾರ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಂಗೈಯಲ್ಲಿ ಚಂದ್ರ ಲೋಕವನ್ನು ತೋರಿಸುವ ಪಕ್ಷವನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಜನರು ಮನವಿ ಮಾಡಿದ್ದಾರೆ. ಸಾರ್ವಜನಿಕರ ಅತ್ಯವಶ್ಯಕ ಬೇಡಿಕೆಗಳಾದ ವಿಟ್ಲ ಯೋಜನಾ ಪ್ರಾಧಿಕಾರ ರಚನೆ, ಅಸಮತೋಲನ ತೆರಿಗೆ ಕ್ರಮವನ್ನು ಮರು ಪರಿಶೀಲನೆ ಮಾಡಿ ಕಡಿತಗೊಳಿಸುವುದು. ಮೇಲು ಸೇತುವೆ ನಿರ್ಮಾಣಕ್ಕೆ ಕಾಂಗ್ರೆಸ್ ಆಡಳಿತದ ಆದ್ಯತೆ. ಜನರಿಂದಲೇ ಬೇಡಿಕೆಗಳ ಪಟ್ಟಿ ಬಂದಿದ್ದು, ಇವುಗಳೆಲ್ಲವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಉತ್ತಮ ಸಲಹೆಯನ್ನು ಕಾಂಗ್ರೆಸ್ ನಿರಂತರವಾಗಿ ಪಡೆದುಕೊಂಡು ಅವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.

ADVERTISEMENT

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ, ಮತ ಕೇಳಲು ಹೋಗುವ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಸಂಕೋಚವಿಲ್ಲ. ಪ್ರಜೆಗಳ ಪ್ರಣಾಳಿಕೆಯನ್ನು ನಾವುಗಳು ನಡೆಸಿಕೊಡಲು ಬದ್ದರಾಗಿದ್ದೇವೆ. 400 ಕೆ. ವಿ ವಿದ್ಯುತ್ ಯೋಜನೆ ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ರೈತರು ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ ಬ್ಯಾನರ್ ಅಳವಡಿಸಿದ್ದರು. ಅವರ ಮನೆಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಈ ವಿಚಾರವನ್ನು ಎರಡೂ ಅಧಿವೇಶನಗಳಲ್ಲಿ ಚರ್ಚಿಸ ಲಾಗುವುದು. ಪುತ್ತೂರು ಜಿಲ್ಲೆ ರಚನೆ ಸಂದರ್ಭದಲ್ಲಿ ವಿಟ್ಲ ತಾಲ್ಲೂಕು ರಚನೆ ವಿಚಾರವನ್ನು ಪರಿಗಣಿಸಲಾಗುವುದು
ಎಂದರು.

ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ., ಚುನಾವಣಾ ಉಸ್ತುವಾರಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ. ಮಠಂತಬೆಟ್ಟು, ಎಂ.ಎಸ್ ಮಹಮ್ಮದ್, ಚಂದ್ರ ಹಾಸ ಕರ್ಕೇರ, ಕೆಪಿಸಿಸಿ ಸಂಯೋಜಕ ಚಿತ್ತರಂಜನ್ ಶೆಟ್ಟಿ, ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಪ್ರಶಾಂತ್ ಪಕ್ಕಳ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಮಾಜಿ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಅಲ್ತಾಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.