ADVERTISEMENT

ಕೊರೊನಾ ವದಂತಿ: ನಲುಗಿದ ಕುಕ್ಕುಟೋದ್ಯಮ

ಕರಾವಳಿಯಲ್ಲಿ ಕೋಳಿ ಮಾಂಸದ ಧಾರಣೆ ದಾಖಲೆಯ ಕುಸಿತ

ಪ್ರದೀಶ್ ಎಚ್.ಮರೋಡಿ
Published 29 ಫೆಬ್ರುವರಿ 2020, 5:15 IST
Last Updated 29 ಫೆಬ್ರುವರಿ 2020, 5:15 IST
ಕೋಳಿ ಮಾಂಸ
ಕೋಳಿ ಮಾಂಸ   

ಮಂಗಳೂರು: ಕೋಳಿ ಮಾಂಸ ಸೇವನೆಯಿಂದ ‘ಕೋವಿಡ್-19’ (ಕೊರೊನಾ) ಸೋಂಕು ತಗುಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿಯಿಂದ ಕರಾವಳಿ ಭಾಗದಲ್ಲಿ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿರುವುದರಿಂದ ಬೆಲೆಯಲ್ಲೂ ದಾಖಲೆಯ ಇಳಿಕೆ ಕಂಡಿದ್ದು, ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಮೂರು ವಾರಗಳಿಂದ ಕೋಳಿ ಮಾಂಸದ ಬೆಲೆಯು ಇಳಿಮುಖವಾಗಿದ್ದು, ಮೂರ್ನಾಲ್ಕು ದಿನಗಳಿಂದ 1 ಕೆ.ಜಿ ಮಾಂಸವು ₹ 100ರ ಆಸುಪಾಸಿನಲ್ಲಿ ಧಾರಣೆಯಾಗುತ್ತಿದೆ. ಧಾರಣೆ ಕುಸಿತವಾದರೂ ಮಾಂಸಕ್ಕೆ ಬೇಡಿಕೆ ಹೆಚ್ಚಳವಾಗದಿರುವುದು ಕುಕ್ಕುಟೋದ್ಯಮಿಗಳನ್ನು ಚಿಂತೆಗೀಡು ಮಾಡಿದೆ.

‘20 ದಿನಗಳಿಂದ ಕರಾವಳಿಯಲ್ಲಿ ಕುಕ್ಕುಟೋದ್ಯಮ ಅಕ್ಷರಶಃ ನಲುಗಿದೆ. ಉದ್ಯಮಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಇಷ್ಟು ದಿನ ಕಳೆದರೂ ಉದ್ಯಮ ಚೇತರಿಸುವ ಲಕ್ಷಣ ಕಾಣಿಸುತ್ತಿಲ್ಲ. ಇದೇ ಪರಿಸ್ಥಿತಿ ಒಂದೆರಡು ತಿಂಗಳು ಮುಂದುವರಿದರೆ ಕರಾವಳಿಯಲ್ಲಿ ಉದ್ಯಮವೇ ನಿರ್ನಾಮವಾದರೂ ಅಚ್ಚರಿಯಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಐಡಿಯಲ್‌ ಚಿಕನ್‌ನ ಮಾಲೀಕ ವಿನ್ಸೆಂಟ್ ಕುಟಿನ್ಹೋ.

ADVERTISEMENT

‘ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದಾಗ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಈತನಕ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಕುಕ್ಕುಟೋದ್ಯಮ ಅಳಿದರೆ ಅದರ ನೇರ ಪರಿಣಾಮ ಕೃಷಿಯ ಮೇಲೆ ಬೀಳುತ್ತದೆ ಎಂಬುದನ್ನು ಸರ್ಕಾರ ಮರೆಯಬಾರದು. ಕುಕ್ಕುಟೋದ್ಯಮ ತತ್ತರವಾಗಿರುವುದರ ಪರಿಣಾಮವಾಗಿ ಇಂದು ಜೋಳದ ಬೆಲೆಯೂ ಇಳಿಕೆಯಾಗಿದೆ. ಇದೇ ರೀತಿ ಒಂದೊಂದೇ ಕೃಷಿ ಉತ್ಪನ್ನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕುಕ್ಕುಟೋದ್ಯಮದ ನೆರವಿಗೆ ಬರಲಿ’ ಎಂದು ಅವರು ಮನವಿ ಮಾಡಿದ್ದಾರೆ.

‘ಪ್ರಕೃತಿದತ್ತವಾಗಿ ಸಿಗುವ ಮತ್ಸೋತ್ಸಮಕ್ಕೆ ಸರ್ಕಾರದಿಂದ ತೆರಿಗೆ ವಿನಾಯಿತಿ, ಸಹಾಯಧನ ಲಭ್ಯವಿದೆ. ಅದೇ ಕುಕ್ಕುಟೋದ್ಯಮಕ್ಕೆ ಸರ್ಕಾರದಿಂದ ಒಂದೇ ಒಂದು ರೂಪಾಯಿ ಸಹಾಯಧನ ಸಿಗುತ್ತಿಲ್ಲ. ಮಾತ್ರವಲ್ಲ, ಪ್ರತಿಯೊಂದಕ್ಕೂ ತೆರಿಗೆಯ ಮೇಲೆ ತೆರಿಗೆಯನ್ನು ವಸೂಲು ಮಾಡಲಾಗುತ್ತಿದೆ. ಸರ್ಕಾರ ಈಗಲೂ ನಮ್ಮ ಕೈಹಿಡಿಯದಿದ್ದರೆ ಹಂತಹಂತವಾಗಿ ಕೋಳಿ ಸಾಕಣೆ ಘಟಕಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಗಾ ಇಡಬೇಕು. ವದಂತಿಗಳನ್ನು ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾರೋ ಮಾಡಿದ ತಪ್ಪಿನಿಂದಾಗಿ ಇಡೀ ಕುಕ್ಕುಟೋದ್ಯಮ ಅಳಿವು– ಉಳಿವಿನ ಅಂಚಿನಲ್ಲಿದೆ. ಕರಾವಳಿಯಲ್ಲಿ ಸಾವಿರಾರು ಕುಟುಂಬಗಳು ಇದೇ ಉದ್ಯಮವನ್ನು ನಂಬಿಕೊಂಡು ಬದುಕುತ್ತಿವೆ. ಈ ಉದ್ಯಮದ ನೆರವಿಗೆ ಸರ್ಕಾರ ತಕ್ಷಣ ಬರಬೇಕು’ ಎನ್ನುತ್ತಾರೆ ಹೈನೋದ್ಯಮಿ ನಾರಾಯಣ ಪೂಜಾರಿ.

ಕೋಳಿ ಮೊಟ್ಟೆಯೂ ಅಗ್ಗ

ತಿಂಗಳ ಹಿಂದೆ ಕೋಳಿ ಮೊಟ್ಟೆಯೊಂದಕ್ಕೆ ₹ 5ರಿಂದ ₹ 5.30ರಲ್ಲಿ ಧಾರಣೆಯಾಗುತ್ತಿತ್ತು. ಕೊರೊನಾ ವದಂತಿಯೂ ಕೋಳಿ ಮೊಟ್ಟೆಯ ಧಾರಣೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ಮೊಟ್ಟೆಯ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬೆಲೆಯು ₹ 4ರಿಂದ ₹ 4.50ರ ಆಸುಪಾಸಿನಲ್ಲಿ ಧಾರಣೆಯಾಗುತ್ತಿದೆ.

***

ಕೋಳಿ ಮಾಂಸ ಸೇವನೆಯಿಂದ ‘ಕೋವಿಡ್-19’ ಸೋಂಕು ಹರಡುವುದಿಲ್ಲ. ವದಂತಿಯನ್ನು ಯಾರೂ ನಂಬಬೇಡಿ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
-ಡಾ.ರಾಮಕೃಷ್ಣ ರಾವ್,ಜಿಲ್ಲಾ ಆರೋಗ್ಯಾಧಿಕಾರಿ

ಜನವರಿ– ಫೆಬ್ರುವರಿ ಅವಧಿಯಲ್ಲಿ ಸಾಮಾನ್ಯವಾಗಿ ಕೋಳಿ ಮಾಂಸದ ಧಾರಣೆ ಶೇ 15ರಿಂದ 20ರಷ್ಟು ಕಡಿಮೆಯಾಗುತ್ತದೆ. ಆದರೆ, ಈ ಬಾರಿ ವದಂತಿಯಿಂದಾಗಿ ಮತ್ತೆ ಶೇ 20ರಷ್ಟು ಬೇಡಿಕೆ ಕುಸಿದಿದೆ.
-ವಿನ್ಸೆಂಟ್ ಕುಟಿನ್ಹೋ,ಐಡಿಯಲ್‌ ಚಿಕನ್‌ನ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.