ಮಂಗಳೂರು: ಪಾಲಿಕೆಯು ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಮೂರು ವರ್ಷಗಳು ಕಳೆದರೂ, ಅದರಲ್ಲಿ ಗುರುತಿಸಿದ್ದ ಬಹುತೇಕ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನೂ ಗುರುತಿನ ಚೀಟಿಯನ್ನೇ ವಿತರಿಸಿಲ್ಲ. ಬೀದಿ ಬದಿ ವ್ಯಾಪಾರಕ್ಕಾಗಿ ಸ್ಟೇಟ್‌ಬ್ಯಾಂಕ್‌ನ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ವಲಯವನ್ನು ಗುರುತಿಸಿ 132 ಮಳಿಗೆಗಳನ್ನು ಮೂರು ತಿಂಗಳ ಹಿಂದೆ ನಿರ್ಮಿಸಲಾಗಿದೆ. ಆದರೆ ಅವುಗಳ ಹಂಚಿಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಬೀದಿ ಬದಿ ವ್ಯಾಪಾರಿಗಳು ಸರಕು ಸಂರಜಾಮು ತೆರವುಗೊಳಿಸಲು ಅಮಿತೋತ್ಸಾಹ ತೋರಿಸುವ ಪಾಲಿಕೆ, ಅವರಿಗೆ ಕಾನೂನುಬದ್ಧವಾಗಿ ನೀಡಬೇಕಾದ ಸವಲತ್ತುಗಳ ಕುರಿತು ವಹಿಸುತ್ತಿವ ಕಾಳಜಿ ಎಷ್ಟು ಎಂಬುದಕ್ಕೆ ಉದಾಹರಣೆಗಳಿವು.
ಪಾಲಿಕೆ ಸಮೀಕ್ಷೆ ನಡೆಸಿ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಬೇಕು. ನಗರದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಪ್ರತ್ಯೇಕ ವಲಯಗಳನ್ನು ನಿರ್ಮಿಸಿ ಅಲ್ಲಿ ಮಳಿಗೆಗಳನ್ನು ನಿರ್ಮಿಸಿ ಅವರಿಗೆ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುತ್ತದೆ 2014ರ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು 2021ರಲ್ಲೇ ನಡೆಸಲಾಗಿದೆ. 1045 ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಲ್ಲಿ 667 ಮಂದಿಗೆ ಗುರುತಿನ ಚೀಟಿ ನೀಡಲು ಪಟ್ಟಣ ವ್ಯಾಪಾರ ಸಮಿತಿ ನಿರ್ಧರಿಸಿತ್ತು. ಆದರೆ ವಿತರಿಸಿರುವುದು ಬೆರಳೆಣಿಕೆ ಮಂದಿಗೆ ಮಾತ್ರ. ಸಮೀಕ್ಷೆ 2025ರ ಫೆಬ್ರುವರಿವರೆಗೆ ಮಾತ್ರ ಊರ್ಜಿತದಲ್ಲಿರುತ್ತದೆ. ಅಷ್ಟರೊಳಗೆ ಮತ್ತೆ ಸಮೀಕ್ಷೆ ನಡೆಸಬೇಕಿದೆ. ಅನುದಾನ ಕೊರತೆಯಿಂದ ಹೊಸ ಸಮೀಕ್ಷೆಯೂ ಆರಂಭವಾಗಿಲ್ಲ.
‘ಹೊಸತಾಗಿ ಸಮೀಕ್ಷೆ ನಡೆಸಲು ಅನುದಾನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.
2024ರ ಆಗಸ್ಟ್‌ನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಪಾಲಿಕೆ ‘ಟೈಗರ್’ ಕಾರ್ಯಾಚರಣೆ ನಡೆಸಿ ಅವರ ಸರಕು ಸರಂಜಾಮುಗಳನ್ನು ವಶಪಡಿಸಿಕೊಂಡಿತ್ತು. ಅನೇಕರ ಬೀದಿ ಬದಿ ವ್ಯಾಪಾರಿ ಅಕ್ಷರಶಃ ಬೀದಿಪಾಲಾಗಿದ್ದರು. ಈ ಬಗ್ಗೆ ವ್ಯಾಪಾರಿಗಳು ಪಾಲಿಕೆ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು. ಪ್ರತ್ಯೇಕ ವಲಯ ಗುರುತಿಸುವವರೆಗೆ ಆಯಾ ಸ್ಥಳದಲ್ಲೇ ವ್ಯಾಪಾರ ಮುಂದುವರಿಸಲು ಪಾಲಿಕೆ ಅನುವು ಮಾಡಿಕೊಟ್ಟಿತ್ತು.
‘ಪಿ.ಎಂ ಸ್ವನಿಧಿ ಯೋಜನೆಯಡಿ 667 ಮಂದಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡಿ ಬೀದಿ ಬದಿ ವ್ಯಾಪಾರಕ್ಕೆ ಉತ್ತೇಜನ ನೀಡಿರುವ ಪಾಲಿಕೆ ಇನ್ನೊಂದೆಡೆ ನಮ್ಮ ಸರಕು ಸರಂಜಾಮು ಹೊತ್ತೊಯ್ದು ಕಿರುಕುಳ ನೀಡುತ್ತಿದೆ. ಸವಲತ್ತು ಕಲ್ಪಿಸಲು ಮೀನ ಮೇಷ ಮಾಡಲಾಗುತ್ತಿದೆ. ಗುರುತಿನ ಚೀಟಿ ವಿತರಣೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ’ ಎಂಬುದು ಬೀದಿ ಬದಿ ವ್ಯಾಪಾರಿಗಳ ಆರೋಪ.
‘ಪಾಲಿಕೆ ಆಡಳಿತ ಪಕ್ಷದ ಜೊತೆ ಉತ್ತಮ ಸಂಬಂಧ ಹೊಂದಿದವರಿಗೆ ಗುರುತಿನ ಚೀಟಿ ಸಿಕ್ಕಿದೆ. ಆದರೆ ಹೊಟ್ಟೆಪಾಡಿಗಾಗಿ 20– 30 ವರ್ಷಗಳಿಂದ ವ್ಯಾಪಾರದಲ್ಲಿ ತೊಡಗಿರುವವರಿಗೆ ಇನ್ನೂ ಗುರುತಿನ ಚೀಟಿ ಸಿಕ್ಕಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ದೂರಿದರು.
‘ನಾವು 25– 30 ವರ್ಷಗಳಿಂದ ಇಲ್ಲಿ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದೇವೆ. ಹಿಂದೆ ಎರಡು ಸಲ ಪಾಲಿಕೆ ನಮಗೆ ಗುರುತಿನ ಚೀಟಿ ನೀಡಿದೆ. ಆದರೆ 2021ರ ಸಮೀಕ್ಷೆ ಬಳಿಕ ಗುರುತಿನ ಚೀಟಿಯನ್ನು ನವೀಕರಿಸಿಲ್ಲ. ಸೆಂಟ್ರಲ್ ವಾರ್ಡ್‌ನಲ್ಲಿ ಇನ್ನೂ ಬೀದಿ ಬದಿ ವ್ಯಾಪಾರ ವಲಯ ಗುರುತಿಸಿಲ್ಲ’ ಎಂದು ಲೇಡಿಗೋಷನ್ ಬಳಿಯ ಬೀದಿ ಬದಿ ವ್ಯಾಪಾರಿಗಳು ದೂರಿದರು.
‘ಪಾಲಿಕೆ ಜೊತೆ ಸಂಘರ್ಷ ನಮಗೂ ಇಷ್ಟವಿಲ್ಲ. ಬೀದಿ ಬದಿ ವ್ಯಾಪಾರಕ್ಕೆ ಪ್ರತ್ಯೇಕ ಜಾಗ ಗುರುತಿಸಿ ಮಳಿಗೆ ನಿರ್ಮಿಸಿ ಕೊಟ್ಟರೆ ನಾವು ಖಂಡಿತಾ ಅಲ್ಲೇ ವ್ಯಾಪಾರ ನಡೆಸಲು ಸಿದ್ಧ. ಆದರೆ ಅದನ್ನೂ ಪಾಲಿಕೆ ಮಾಡುತ್ತಿಲ್ಲ’ ಎಂದು ಬೀದಿ ಬದಿ ವ್ಯಾಪಾರಿ ಸಂತೋಷ್ ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಹೊಸತಾಗಿ ಬೀದಿ ಬದಿ ಸಮೀಕ್ಷೆ ನಡೆಸುವಾಗ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಅರ್ಹರಿಗೆ ಕಾನೂನು ಬದ್ಧ ಸವಲತ್ತು ನೀಡಬೇಕು ಎಂದು 25 ವರ್ಷಗಳಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ವಿಜಯ್ ಕುಮಾರ್ ಒತ್ತಾಯಿಸಿದರು.
‘ನಗರದಲ್ಲಿ 33 ಕಡೆ ಬೀದಿ ಬದಿ ವ್ಯಾಪಾರ ವಲಯಗಳನ್ನು ಗುರುತಿಸಲು ಉದ್ದೇಶಿಸಲಾಗಿದೆ. 29 ಕಡೆ ಈಗಾಗಲೇ ಜಾಗ ಗುರುತಿಸಲಾಗಿದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಒಂದು ವಾರ್ಡ್‌ನಲ್ಲಿ ಮಳಿಗೆ ನಿರ್ಮಿಸಿ ಇನ್ನೊಂದು ವಾರ್ಡ್‌ನಲ್ಲಿ ನಿರ್ಮಿಸದಿದ್ದರೆ ಸಮಸ್ಯೆ ಎದುರಾಗುತ್ತದೆ. ಎಲ್ಲಾ ಕಡೆಯೂ ಆದಷ್ಟು ಬೇಗ ಮಳಿಗೆ ನಿರ್ಮಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಕ್ಕಾಗಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಬಳಿ ನಿರ್ಮಿಸಿದ ಮಳಿಗೆಗಳನ್ನು ಇದೇ 21ಕ್ಕೆ ಲೋಕಾರ್ಪಣೆ ಮಾಡಲು ಚಿಂತನೆ ನಡೆಸಿದ್ದೇವೆ. ಅದನ್ನು ಬಳಸಿ ಬೀದಿ ಬದಿ ವ್ಯಾಪಾರಿಗಳು ಉತ್ತಮ ಬದುಕು ಕಟ್ಟಿಕೊಳ್ಳಬೇಕುಆನಂದ್ ಸಿ.ಎಲ್ ಪಾಲಿಕೆ ಆಯುಕ್ತ
ನಾನು 25 ವರ್ಷಗಳಿಂದ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದೇನೆ. ಸಮೀಕ್ಷೆ ನಡೆಸಿ ಮೂರು ವರ್ಷದ ಬಳಿಕವೂ ನನಗೆ ಗುರುತಿನ ಚೀಟಿ ನೀಡಿಲ್ಲ. ನಮಗೆ ಕಾನೂನುಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪಾಲಿಕೆ ಒದಗಿಸಬೇಕುವಿಜಯ್ ಕುಮಾರ್ ಬೀದಿ ಬದಿ ವ್ಯಾಪಾರಿ
ಬೀದಿ ಬದಿ ವ್ಯಾಪಾರಕ್ಕೆ ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕ ವಲಯ ಗುರುತಿಸಿ ಮಳಿಗೆ ನಿರ್ಮಿಸಬೇಕು. ಬೀದಿ ಬದಿ ವ್ಯಾಪಾರದಲ್ಲಿ ನಿಜವಾಗಿಯೂ ತೊಡಗಿಸಿಕೊಂಡವರಿಗಷ್ಟೇ ಗುರುತಿನ ಚೀಟಿ ನೀಡಬೇಕು ಈ ವಿಚಾರದಲ್ಲಿ ರಾಜಕೀಯ ಸಲ್ಲದುಸಂತೋಷ್ ಬೀದಿ ಬದಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.