ADVERTISEMENT

ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ

ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:57 IST
Last Updated 19 ಮೇ 2020, 14:57 IST

ಮಂಗಳೂರು: ಸಿಪಿಐ ರಾಷ್ಟ್ರೀಯ ಮಂಡಳಿ ಕರೆಯಂತೆ ಮಂಗಳವಾರ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧವಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಯಿತು. ಇದರ ಅಂಗವಾಗಿ ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್– 19ರ ವಿರುದ್ಧ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಸಮಯದಲ್ಲಿ ಸರ್ಕಾರ ಬಡವರ ಮತ್ತು ಕಾರ್ಮಿಕರ ಬವಣೆಗಳನ್ನು ನಿರ್ಲಕ್ಷಿಸುತ್ತಿದೆ. ಅಸಂಘಟಿತ ಕಾರ್ಮಿಕರು ಈ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದು, ಅವರಿಗೆ ಪರಿಹಾರ ಒದಗಿಸುವುದರಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂದು ದೂರಲಾಗಿದೆ.

ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಸೂಕ್ತ ರೈಲು ಅಥವಾ ವಾಹನ ಒದಗಿಸುತ್ತಿಲ್ಲ. ಅವರಿಗೆ ಪಡಿತರ ಮತ್ತು ವಸತಿ ಸಿಗುತ್ತಿಲ್ಲ. ಲಾಕ್‌ಡೌನ್ ದುರುಪಯೋಗ ಪಡಿಸಿಕೊಂಡು ಕೆಲ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಯಿಸುತ್ತಿವೆ. 8 ಗಂಟೆಗಳ ಕೆಲಸದ ಹಕ್ಕನ್ನು ಹಿಂಪಡೆದು, ಕಾರ್ಮಿಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕೆಂಬ ಕಾನೂನು ತರಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುಸಂಖ್ಯಾತರಾಗಿರುವ ಬೀಡಿ ಕಾರ್ಮಿಕರಿಗೆ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಲಾಗಿದೆ.

ADVERTISEMENT

ಇವೆಲ್ಲವುಗಳನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು. ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ವಿ. ರಾವ್, ಪಕ್ಷದ ಮುಂದಾಳುಗಳಾದ ನಾಗೇಶ್ ಕೆ., ಜಗತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.