ADVERTISEMENT

ಪ್ರಾಧ್ಯಾಪಕಿಗೆ ಕಿರುಕುಳ: 3 ಮಂದಿ ಬಂಧನ

ಸಿಸಿಬಿ ಕಾರ್ಯಾಚರಣೆ, ಮತ್ತಷ್ಟು ಮಂದಿ ಬಂಧನ ಸಾಧ್ಯತೆ: ಶಶಿಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 15:28 IST
Last Updated 20 ಏಪ್ರಿಲ್ 2022, 15:28 IST
ಎನ್‌. ಶಶಿಕುಮಾರ್
ಎನ್‌. ಶಶಿಕುಮಾರ್   

ಮಂಗಳೂರು: ಪ್ರಾಧ್ಯಾಪಕಿಯೊಬ್ಬರ ಬಗ್ಗೆ ಮಾನಹಾನಿಕರ ಪೋಸ್ಟರ್‌ ಬರೆದು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿ ಕಿರುಕುಳ ನೀಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ‘ಬಂಟ್ವಾಳ ಖಾಸಗಿ ಶಿಕ್ಷಣ ಸಂಸ್ಥೆಯ ಸಂಚಾಲಕ, ಲಾಯ್ಲ ನಿವಾಸಿ ಪ್ರಕಾಶ್ ಶೆಣೈ, ಇದೇ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ, ಹೆಬ್ರಿ ತಾಲ್ಲೂಕಿನ ನಾಡ್ಪಾಲು ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ ತಾರಾನಾಥ ಶೆಟ್ಟಿ ಬಂಧಿತ ಆರೋಪಿಗಳು. ಇವರ ಕೃತ್ಯಕ್ಕೆ ಸಹಕರಿಸಿದ ಇನ್ನೂ ಮೂರು ಮಂದಿಯ ಬಂಧನಕ್ಕೆ ಕ್ರಮ ವಹಿಸಲಾಗಿದೆ’ ಎಂದರು.

ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರವಾಗಿ ಕಾಲೇಜೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರ ಭಾಗವಾಗಿ ಪ್ರಾಧ್ಯಾಪಕಿ ವಿರುದ್ಧ ಮಾನ ಹಾನಿಕರ ಪೋಸ್ಟ್‌ರ ಹಾಗೂ ಪತ್ರ ಹಂಚಲಾಗಿತ್ತು. ಆರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿ ಭಾವಚಿತ್ರದ ಜತೆಗೆ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರ ಬರಹವನ್ನು ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದರು.

ADVERTISEMENT

ಇದಾದ ನಂತರ ಪ್ರಾಧ್ಯಾಪಕಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಖಾತೆ ನಮೂದಿಸಿ ಅಶ್ಲೀಲ ಪೋಸ್ಟರ್‌ಗಳನ್ನು ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್‌.ಆರ್. ಪುರ, ಶಿವಮೊಗ್ಗ ಮುಂತಾದ ಬಸ್ ನಿಲ್ದಾಣಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಮಹಿಳಾ ಪ್ರಾಧ್ಯಾಪಕಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಾಧ್ಯಾಪಕಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಡಿಸಿಪಿ ಹರಿರಾಂ ಶಂಕರ್, ಸಿಸಿಬಿ ಇನ್‍ಸ್ಪೆಕ್ಟರ್ ಮಹೇಶ್ ಪ್ರಸಾದ್, ಸೆನ್ ಇನ್‍ಸ್ಪೆಕ್ಟರ್ ಸತೀಶ್ ಇದ್ದರು.

ಆತ್ಮಹತ್ಯೆಗೆ ಮುಂದಾಗಿದ್ದ ದಂಪತಿ

ಕಿರುಕುಳದಿಂದ ತೀವ್ರ ನೊಂದಿದ್ದ ಸಂತ್ರಸ್ತೆ ಹಾಗೂ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ದಿನವೂ ಬರುತ್ತಿದ್ದ ಅನಾಮಧೇಯ ಕರೆಗಳು ಹಾಗೂ ಪತ್ರಗಳಿಂದ ನೊಂದಿದ್ದ ದಂಪತಿ ಹತಾಶೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದರು, ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲಾಯಿತು ಎಂದು ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದರು.

ಸಹದ್ಯೋಗಿಗಳ ಕೃತ್ಯ: ದುಃಖ ತಂದಿದೆ

‘ವಿದ್ಯಾವಂತರಾಗಿರುವ ನನ್ನ ಸಹದ್ಯೋಗಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ತಿಳಿದು ದುಃಖವಾಗಿದೆ’ ಎಂದು ಪ್ರಾಧ್ಯಾಪಕಿ ನೋವಿನಿಂದ ಹೇಳಿದರು.

ಸುಮಾರು ಒಂದು ವರ್ಷದಿಂದ ಅನಾಮಧೇಯ ಪತ್ರಗಳು ಬರುತ್ತಿದ್ದವು. ಫೆ. 8ರಿಂದ ಫೋನ್‌ ಕರೆ ಬರಲಾರಂಭಿಸಿದವು. ಅಪರಿಚಿತರಿಂದ 800ಕ್ಕೂ ಹೆಚ್ಚು ಕರೆಗಳು ಬಂದಿವೆ. ಆನ್‍ಲೈನ್ ತರಗತಿ ಇದ್ದುದರಿಂದ ಪಾಠ ಮಾಡುವುದು ಕಷ್ಟವಾಗಿತ್ತು. ಮೊಬೈಲ್ ಬದಿಗಿಟ್ಟು ತರಗತಿ ನಡೆಸಲು ಸಾಧ್ಯವಿರಲಿಲ್ಲ. ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.